ADVERTISEMENT

ಮಹಿಳಾ ಟೆನಿಸ್‌: ಜೆಸ್ಸಿ ಚಾಂಪಿಯನ್‌; ಭಾರತದ ಶ್ರೀವಲ್ಲಿ ರನ್ನರ್‌ ಅಪ್‌

ಆರ್.ಜಿತೇಂದ್ರ
Published 14 ಅಕ್ಟೋಬರ್ 2024, 2:02 IST
Last Updated 14 ಅಕ್ಟೋಬರ್ 2024, 2:02 IST
ಮೈಸೂರು ಓಪನ್ ಟೆನಿಸ್ ಟೂರ್ನಿಯ ರನ್ನರ್ ಅಪ್‌ ಬಿ.ಆರ್. ಶ್ರೀವಲ್ಲಿ (ಎಡ) ಹಾಗೂ ಚಾಂಪಿಯನ್‌ ಜೆಸ್ಸಿ ಆ್ಯನಿ  ಟ್ರೋಫಿಯೊಂದಿಗೆ  –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಓಪನ್ ಟೆನಿಸ್ ಟೂರ್ನಿಯ ರನ್ನರ್ ಅಪ್‌ ಬಿ.ಆರ್. ಶ್ರೀವಲ್ಲಿ (ಎಡ) ಹಾಗೂ ಚಾಂಪಿಯನ್‌ ಜೆಸ್ಸಿ ಆ್ಯನಿ  ಟ್ರೋಫಿಯೊಂದಿಗೆ  –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಅಮೆರಿಕದ ಜೆಸ್ಸಿ ಆ್ಯನಿ ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೈಸೂರು ಓಪನ್‌ ಮಹಿಳೆಯರ ಐಟಿಎಫ್ ಟೆನಿಸ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಇಲ್ಲಿನ ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ) ಅಂಗಳದಲ್ಲಿ ಬರೋಬ್ಬರಿ ಎರಡೂವರೆ ಗಂಟೆ ಕಾಲ ನಡೆದ ಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ಜೆಸ್ಸಿ 3–6, 6–3, 7–6 ( 8–6)ರಿಂದ ಅಗ್ರ ಶ್ರೇಯಾಂಕದವರಾದ, ಭಾರತದ ಬಿ.ಆರ್‌. ಶ್ರೀವಲ್ಲಿ ವಿರುದ್ಧ  ಜಯಿಸಿದರು.  ಜೆಸ್ಸಿ ಶನಿವಾರ ಟೂರ್ನಿಯ ಡಬಲ್ಸ್ ವಿಭಾಗದಲ್ಲೂ ರಿಯಾ ಭಾಟಿಯಾ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು.

ಶ್ರೀವಲ್ಲಿ ಮೊದಲ ಸೆಟ್‌ನಲ್ಲಿ ಮುನ್ನಡೆ ಸಾಧಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮತ್ತೆ ಪಂದ್ಯ ಆರಂಭದೊಂದಿಗೆ ಜೆಸ್ಸಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡರು. ಮೊದಲ ಸೆಟ್‌ ಸೋತರೂ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಎದುರಾಳಿಯ ಬಲವಾದ ಹೊಡೆತಗಳಿಗೆ ತಾಳ್ಮೆಯಿಂದ ಉತ್ತರ ನೀಡಿದ ಜೆಸ್ಸಿ, ಆಕೆಯೇ ತಪ್ಪೆಸಗುವವರೆಗೂ ಕಾದರು.

ADVERTISEMENT

ಮೂರನೇ ಸೆಟ್‌ನ ಆರಂಭದಿಂದಲೂ ಇಬ್ಬರೂ ಆಟಗಾರ್ತಿಯರು ಸಮಬಲ ಸಾಧಿಸಿದ್ದು, 6–6ರಲ್ಲಿ ಸ್ಕೋರ್ ಸಮನಾಯಿತು. ಅಂತಿಮವಾಗಿ ಜೆಸ್ಸಿ ಟೈಬ್ರೇಕರ್‌ನಲ್ಲಿ ಮುನ್ನಡೆ ಸಾಧಿಸಿ ಪಂದ್ಯ ಗೆದ್ದರು.

ಜೆಸ್ಸಿ ಟ್ರೋಫಿಯೊಂದಿಗೆ 2352 ಅಮೆರಿಕನ್ ಡಾಲರ್ (₹1.97 ಲಕ್ಷ) ಮೊತ್ತದ ನಗದು ಹಾಗೂ 15 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ಶ್ರೀವಲ್ಲಿ ರನ್ನರ್ ಅಪ್‌ ಟ್ರೋಫಿಯೊಂದಿಗೆ 1470 ಅಮೆರಿಕನ್ ಡಾಲರ್ (₹1.23 ಲಕ್ಷ) ನಗದು ಹಾಗೂ 10 ಪಾಯಿಂಟ್ಸ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.