ಮೈಸೂರು: ಅಲ್ಲಿ ನಲ್ವತ್ತಕ್ಕೂ ಹೆಚ್ಚು ದುಡಿವ ಕೈಗಳಿವೆ, ವಿವಿಧ ಕೌಶಲಗಳು ಕರಗತವಾಗಿವೆ. ಆದರೆ, ಆ ಕೈಗಳಿಗೆ ಕೆಲಸವೇ ಇಲ್ಲ!
ಇದು ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸ್ತ್ರೀ ಸೇವಾ ನಿಕೇತನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವವರ ಸ್ಥಿತಿ.
ಬಾಲಕಿಯರು, ಸಂಬಂಧಿಕರು ಇದ್ದರೂ ಅನಾಥರಾಗಿರುವವರು, ವಿಚ್ಛೇದನ ಪಡೆದವರು, ಮನೆಯಿಂದ ಹೊರಹಾಕಲ್ಪಟ್ಟವರು, ತಂದೆ ತಾಯಿ ಇಲ್ಲದ ತಬ್ಬಲಿಗಳು, ಮಾನಸಿಕ ಅಸ್ವಸ್ಥರು, ವೃದ್ಧೆಯರು ಸೇರಿದಂತೆ 8 ರಿಂದ 65 ವರ್ಷದವರೆಗಿನ ಸುಮಾರು 65 ಮಂದಿ ಆಶ್ರಯ ಪಡೆದಿದ್ದು, ಒಬ್ಬೊಬ್ಬರ ಹಿಂದೆಯೂ ಒಂದೊಂದು ನೋವಿನ ಕಥೆಯಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ರಾಜ್ಯದಲ್ಲಿ 10 ಮಹಿಳಾ ನಿಲಯಗಳಿದ್ದು, ಓದಲು ಆಸಕ್ತಿ ಇರುವವರನ್ನು ಹಾಗೂ ಸಮೀಪದ ಜಿಲ್ಲೆಯವರನ್ನು ಮೈಸೂರಿಗೆ ಕಳುಹಿಸುತ್ತಾರೆ. ಹಾಸನ, ಮಂಡ್ಯ, ಕೊಡಗು, ತುಮಕೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯವರು ಇಲ್ಲಿ ಆಶ್ರಯ ಪಡೆದಿದ್ದಾರೆ.
ಪೇಪರ್ ಬ್ಯಾಗ್, ವಿವಿಧ ಅಲಂಕಾರಿಕ ಆಭರಣ, ಸೀರೆಗೆ ಕೈಯಿಂದಲೇ ಜರಿ ಹಾಕುವುದು, ಕುಚ್ಚು ಹಾಕುವುದು ಸೇರಿದಂತೆ ಎಂಬ್ರಾಯಿಡರಿ ವರ್ಕ್, ಚಿತ್ರಕಲೆ, ಜೇಡಿಮಣ್ಣಿನಿಂದ ಕಲಾಕೃತಿಗಳನ್ನು ತಯಾರಿಸುವ ಕೌಶಲವನ್ನು ಕೆಲವರು ಹೊಂದಿದ್ದಾರೆ. ಆದರೆ, ಕೆಲಸ ನೀಡುವವರು ಇಲ್ಲದ ಕಾರಣ ಸುಮ್ಮನೇ ಕೂರಬೇಕಾಗಿದೆ.
‘ಹಲವು ಸಂಘ ಸಂಸ್ಥೆಗಳು ಬಂದು ವಿವಿಧ ತರಬೇತಿ ನೀಡುತ್ತವೆ. ಆದರೆ, ಕೆಲಸ ಕೊಡುವುದಿಲ್ಲ. ಕಚ್ಚಾವಸ್ತುಗಳನ್ನು ತಂದುಕೊಟ್ಟರೆ ನಾವು ಸಿದ್ಧ ಉತ್ಪನ್ನಗಳನ್ನು ಮಾಡಿಕೊಡುತ್ತೇವೆ. ಕೆಲ ದಿನಗಳ ಹಿಂದೆ ವ್ಯಾಪಾರಿಯೊಬ್ಬರು ಪೇಪರ್ ತಂದುಕೊಟ್ಟರು. ಅವರಿಗೆ 500 ಬ್ಯಾಗ್ ತಯಾರಿಸಿಕೊಟ್ಟೆವು. ಹೀಗೆ ಯಾರಾದರೂ ಕೆಲಸ ಕೊಟ್ಟರೆ ಗುಣಮಟ್ಟದ ವಸ್ತುಗಳನ್ನು ತಯಾರಿಸಿಕೊಡುತ್ತೇವೆ. ಸ್ವಲ್ಪ ಆದಾಯ ಗಳಿಸಿ ಸ್ವಾವಲಂಬಿಗಳಾಗುತ್ತೇವೆ. ಸ್ವಂತ ಬದುಕು ಕಟ್ಟಿಕೊಳ್ಳುತ್ತೇವೆ’ ಎನ್ನುತ್ತಾರೆ ಇಲ್ಲಿನ ವಾಸಿಯೊಬ್ಬರು.
‘ರಂಗರಾವ್ ಅಂಡ್ ಸನ್ಸ್ ಸಂಸ್ಥೆಯವರು ಇಲ್ಲಿ ಗಂಧದಕಡ್ಡಿ ತಯಾರಿಸುವ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದ್ದರು. ಆದರೆ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡಲು ಕೋಣೆಗಳ ಕೊರತೆ ಇರುವುದರಿಂದ ಸುಮ್ಮನಾದರು. ಸದ್ಯ ವರ್ಕ್ ಶೆಡ್ ಕಾಮಗಾರಿ ನಡೆಯುತ್ತಿದ್ದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಯಾರಾದರೂ ಕಟ್ಟಿಸಿಕೊಡಲು ಮುಂದೆ ಬಂದರೆ ಅಥವಾ ನಿಲಯವನ್ನು ದತ್ತು ತೆಗೆದುಕೊಂಡರೆ ನೊಂದ ಮಹಿಳೆಯರಿಗೆ ನೆರವಾದಂತಾಗುತ್ತದೆ’ ಎನ್ನುತ್ತಾರೆ ಪರಿವೀಕ್ಷಣಾಧಿಕಾರಿ ವೀಣಾ.
‘ಇಲ್ಲಿ 8 ವಿದ್ಯಾರ್ಥಿಗಳು, 10ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರು, ತಾಯಿ ಹಾಗೂ 6 ವರ್ಷದ ಮಗು, 5ಕ್ಕೂ ಹೆಚ್ಚು ವೃದ್ಧೆಯರು ಸೇರಿದಂತೆ ಹಲವರು ಬಹು ವರ್ಷಗಳಿಂದ ನೆಲೆಸಿದ್ದಾರೆ. ಪೋಷಕರು, ಕುಟುಂಬದವರು ಇದ್ದರೆ ಕೌನ್ಸೆಲಿಂಗ್ ಮಾಡಿ ಕಳುಹಿಸಿಕೊಡುತ್ತೇವೆ. ಇಲ್ಲದಿದ್ದರೆ ಅನಿವಾರ್ಯವಾಗಿ ಇಲ್ಲೇ ಉಳಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ನಿಲಯದ ಅಧೀಕ್ಷಕಿ ಎಂ.ಹೇಮಾವತಿ.
ಅನೇಕರು ಊಟ ಕೊಡಲು ಮುಂದೆ ಬರುತ್ತಾರೆ. ಸುಳ್ವಾಡಿ ದುರಂತದ ನಂತರ ಅದಕ್ಕೆ ಆಸ್ಪದ ಕೊಡುತ್ತಿಲ್ಲ. ಊಟದ ಬದಲು ದಿನಬಳಕೆಯ ಅಗತ್ಯ ವಸ್ತುಗಳು, ಬಳಸಲು ಯೋಗ್ಯವಾದ ಹಳೆಯ ಬಟ್ಟೆಗಳು, ಪಾದರಕ್ಷೆಗಳು, ಔಷಧಗಳನ್ನು ನೀಡಿದರೆ ಉತ್ತಮ ಎನ್ನುತ್ತಾರೆ ಅವರು
ನಾಲ್ಕು ಗೋಡೆಗಳ ಮಧ್ಯೆ ಇದ್ದು ಬೇಸತ್ತಿರುವ ಅವರ ಮನೋಲ್ಲಾಸಕ್ಕಾಗಿ ಗ್ರಂಥಾಲಯ ಸ್ಥಾಪಿಸಬೇಕೆಂಬ ಉದ್ದೇ ಶವಿದ್ದು ಪುಸ್ತಕಗಳನ್ನು, ಒಳಾಂಗಣ ಕ್ರೀಡಾ ಪರಿಕರಗಳನ್ನೂ ನೀಡಬಹುದು ಎಂದೂ ಹೇಮಾವತಿ ತಿಳಿಸಿದರು.
ಸಂಪರ್ಕಕ್ಕೆ 0821–2543918 ಅಥವಾ 9611009839.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.