ಮೈಸೂರು: ಈಚೆಗೆ ಕಣ್ಣಿಗೆ ಬೀಳುವುದೇ ಅಪರೂಪ ಎನಿಸುತ್ತಿರುವ ಗುಬ್ಬಿಗಳನ್ನು ಮರಳಿ ನಾಡಿಗೆ ತರಲು ಇಲ್ಲೊಬ್ಬ ಮಹಿಳೆ ಅನೇಕ ವರ್ಷಗಳಿಂದ ಸದ್ದಿಲ್ಲದೆ ಪ್ರಯತ್ನಿಸುತ್ತಿದ್ದಾರೆ.
ಕೋಕಿಲಾ ರಮೇಶ್ ಜೈನ್ ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ಮತ್ತೆ ಗುಬ್ಬಿಗಳ ಕಲರವ ಕೇಳಿ ಬರುವಂತೆ ಮಾಡುವಲ್ಲಿ ಸಫಲರಾಗಿರುವ ಮಹಿಳೆ.
ದೇವರಾಜ ಮಾರುಕಟ್ಟೆಯಲ್ಲಿ ಗುಬ್ಬಿಗಳು ಕಣ್ಮರೆಯಾಗಿದ್ದವು. ಇದನ್ನು ಗಮನಿಸಿದ ಕೋಕಿಲಾ, ತಾವೇ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಗುಬ್ಬಿಗೂಡುಗಳನ್ನು ಉಚಿತವಾಗಿ ಅಂಗಡಿಗಳ ಮಾಲೀಕರಿಗೆ ವಿತರಿಸಿದರು. ನಿತ್ಯ ಒಂದು ತಟ್ಟೆಯಲ್ಲಿ ಧಾನ್ಯ ಹಾಕುವಂತೆ ವರ್ತಕರಲ್ಲಿ ಮನವಿ ಮಾಡಿದರು. ತಾವೇ ಉಚಿತವಾಗಿ ಧಾನ್ಯ ವಿತರಿಸಿದರು. ಇದರ ಫಲವಾಗಿ ಮಾರುಕಟ್ಟೆಯಲ್ಲಿ ಗುಬ್ಬಿಗಳ ಚಿಲಿಪಿಲಿ ಮತ್ತೆ ಕೇಳುವಂತಾಗಿದೆ.
‘ಹಲವು ಗೂಡುಗಳನ್ನು ಕೋಕಿಲಾ ಮೇಡಂ ತಂದು ಕೊಟ್ಟರು. ಯಾರಲ್ಲೂ ತನ್ನ ಹೆಸರು ಹೇಳಬೇಡ ಎಂಬುದಾಗಿ ವಿನಂತಿಸಿಕೊಂಡರು. ಅವರು ತಂದುಕೊಟ್ಟ ಗೂಡುಗಳನ್ನು ಬಾಗಿಲಿನಲ್ಲಿ ಕಟ್ಟಿದೆವು. ಹಲವು ಮರಿಗಳು ಈಗ ಇಲ್ಲಿ ವಾಸ ಮಾಡುತ್ತಿವೆ. ಇದಕ್ಕೂ ಮುಂಚೆ ಇಲ್ಲಿ ಗುಬ್ಬಿಗಳೇ ಇರಲಿಲ್ಲ’ ಎಂದು ಮಾರುಕಟ್ಟೆಯ ಹೂವಿನ ವ್ಯಾಪಾರಿ ಮೊಹಮ್ಮದ್ ಅಜ್ಹರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಮತ್ತೊಬ್ಬ ವ್ಯಾಪಾರಿ ಮೊಯಿಬ್ ಅಹಮ್ಮದ್, ‘ನಮಗೆ ಮಾತ್ರವಲ್ಲ; ಹತ್ತಾರು ಅಂಗಡಿಗಳಿಗೆ ಗೂಡುಗಳನ್ನು ಹಾಗೂ ಧಾನ್ಯವನ್ನು ನೀಡಿದ್ದರು. ಆದರೆ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಯಾರೂ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಈಗ ಒಂದಿಷ್ಟು ಅಂಗಡಿಗಳಲ್ಲಿ ಕೋಕಿಲಾ ನೀಡಿರುವ ಗೂಡುಗಳಲ್ಲಿ ಗುಬ್ಬಿಗಳು ವಾಸಿಸುತ್ತಿವೆ. ಅವುಗಳ ಚಿಲಿಪಿಲಿ ಶಬ್ದ ನಮಗೂ ಹಿತ ಎನಿಸುತ್ತಿದೆ’ ಎಂದರು.
ಗೃಹಿಣಿಯಾಗಿರುವ ಕೋಕಿಲಾ 2019ರಿಂದಲೂ ನಿರಂತರವಾಗಿ ಗುಬ್ಬಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಗುಬ್ಬಚ್ಚಿ ದಿನದಂದು ನಗರದ ವಿವಿಧ ಭಾಗಗಳಲ್ಲಿ 500ಕ್ಕೂ ಅಧಿಕ ಗುಬ್ಬಿಗೂಡುಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೋಕಿಲಾ, ‘ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದು ತೀರಾ ಸಂಕೋಚ ತರಿಸುತ್ತದೆ. ಕೆಲವೊಂದು ಗೂಡುಗಳನ್ನು ನನ್ನ ಪರಿಕಲ್ಪನೆಯಂತೆ ವಿನ್ಯಾಸ ಮಾಡಿಸಿದ್ದೇನೆ. ಸಾವಿರಾರು ರೂಪಾಯಿ ಕೊಟ್ಟು ಗುಜರಾತ್‌ನಿಂದ ಕೆಲವೊಂದನ್ನು ತರಿಸಿದ್ದೇನೆ. ಮತ್ತೆ ನಗರದೆಲ್ಲೆಡೆ ಗುಬ್ಬಚ್ಚಿಗಳ ಕಲರವ ಕೇಳಬೇಕು ಎನ್ನುವುದೊಂದೇ ನನ್ನಾಸೆ’ ಎಂದರು.
‘ಗುಬ್ಬಿಯನ್ನು ಹಿಡಿದು ತರಬಾರದು. ಗೂಡು ಕಟ್ಟಲು ಬೇಕಾದ ಜಾಗ ಕಲ್ಪಿಸಿದಾಗ ತಾವಾಗಿಯೇ ಬರುತ್ತವೆ’ ಎಂದು ನುಡಿಯುತ್ತಾರೆ.
ಪಕ್ಷಿಗಳ ನೀರಿಗಾಗಿ ಬೊಂಬಿನ ಬಟ್ಟಲು
ಬೇಸಿಗೆಯಲ್ಲಿ ಉಷ್ಣಾಂಶ ಏರುತ್ತಿರುವ ಈ ಸಮಯದಲ್ಲಿ ಕೋಕಿಲಾ, ಜೀವ್‌ದಯಾ ಜೈನ್ ಚಾರಿಟಿ ಸಂಘಟನೆಯೊಂದಿಗೆ ಕೈಜೋಡಿಸಿ ಬೊಂಬಿನಿಂದ ಮಾಡಿದ ಬಟ್ಟಲುಗಳನ್ನು ಮೈಸೂರಿನ ಎಂ.ಜಿ.ರಸ್ತೆ ಹಾಗೂ ಸುತ್ತಲಿನ ಉದ್ಯಾನಗಳ ಮರಗಳಿಗೆ ತಂತಿಯಿಂದ ಕಟ್ಟಿದ್ದಾರೆ. ನಿತ್ಯ ನೀರು ಹಾಕಿ ಪಕ್ಷಿಗಳು, ಅಳಿಲುಗಳ ದಾಹ ತಣಿಸಬೇಕು ಎಂದು ವಾಯುವಿಹಾರಿಗಳಲ್ಲಿ ಮನವಿ ಮಾಡಿದ್ದಾರೆ.
ದಿನವಿಡೀ ಜಾಗೃತಿ ಇಂದು
ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಮಾರ್ಚ್ 20ರಂದು ಕೋಕಿಲಾ, ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥೆಯ ಜತೆ ಸೇರಿ ದಿನವಿಡೀ ಗುಬ್ಬಚ್ಚಿ ಉಳಿಸುವ ಅಭಿಯಾನ ಕೈಗೊಳ್ಳಲಿದ್ದಾರೆ.
ಕಾರಂಜಿ ಕೆರೆಯ ವಾಹನ ನಿಲುಗಡೆ ತಾಣದ ಬಳಿ ಬೆಳಿಗ್ಗೆ 10 ಗಂಟೆಗೆ, ಎಂಆರ್‌ಸಿ ಕಣ್ಣಿನ ಆಸ್ಪತ್ರೆ ಬಳಿ ಸಂಜೆ 4 ಗಂಟೆಗೆ ಜಾಗೃತಿ ಮೂಡಿಸಲಿದ್ದಾರೆ. ಜತೆಗೆ, ಪರಿಸರ ಉಳಿವಿಗಾಗಿ ಹೋರಾಡುವ ಸಂಘಟನೆಗಳಿಗೆ ಉಚಿತವಾಗಿ ಬೊಂಬಿನ ಬಟ್ಟಲು ವಿತರಿಸಲಿದ್ದಾರೆ.
**
ದಿಲ್ ಕುಶ್ ಕೊಠಾರಿ, ಸವಿತಾ ನಾಗಭೂಷಣ್ ಹಾಗೂ ಇತರರು ನನ್ನ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
-ಕೋಕಿಲಾ ರಮೇಶ್ ಜೈನ್,ಗುಬ್ಬಿ ಸಂರಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.