ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 149 ಹುಲಿಗಳಿರುವುದನ್ನು ಗುರುತಿಸಲಾಗಿದೆ. ಇದು ರಾಜ್ಯದಲ್ಲೇ ಅತಿ ಹೆಚ್ಚು ಎನ್ನಲಾಗಿದೆ.
ರಾಜ್ಯದ 5 ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹುಲಿ ಸಂರಕ್ಷಣೆ ವಿಷಯದಲ್ಲಿ ನಾಗರಹೊಳೆ ಉತ್ತಮ ಸಾಧನೆ ಕಂಡಿದೆ.
‘2007ರಲ್ಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ನಾಗರಹೊಳೆಯನ್ನು ಸರ್ಕಾರ ಘೋಷಿಸಿತ್ತು. ಆಗ 72 ಹುಲಿಗಳಿದ್ದವು, ಇದೀಗ ಎರಡು ಪಟ್ಟು (149) ಹೆಚ್ಚಾಗಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘843 ಚದರ ಕಿ.ಮೀ. ವಿಸ್ತೀರ್ಣದ ನಾಗರಹೊಳೆ ಅರಣ್ಯದಲ್ಲಿ 160 ಹುಲಿಗಳಿಗೆ ಆಶ್ರಯ ನೀಡಲು ಸಾಧ್ಯವಿದೆ. ಮುಂದಿನ 2–3 ವರ್ಷದಲ್ಲಿ ಗರಿಷ್ಠ ಸಂಖ್ಯೆ ಮುಟ್ಟುವ ಸಾಧ್ಯತೆ ಇದೆ. ನಾಗರಹೊಳೆ ಅರಣ್ಯದಲ್ಲಿ ಹುಲಿ ಗಣತಿಗೆ ಒಂದು ಸಾವಿರ ಕ್ಯಾಮೆರಾ ಬಳಸಲಾಗಿದೆ’ ಎಂದರು.
ಇದನ್ನು ಓದಿ; ವಿಶ್ಲೇಷಣೆ | ಸಂರಕ್ಷಣೆಯ ಹೆಸರಿನಲ್ಲಿ ಹಳ್ಳ ಹಿಡಿಯುತ್ತಿದೆಯೇ ಹುಲಿ ಯೋಜನೆ?
‘ಆರಂಭದಲ್ಲಿ ಹುಲಿ ಗಣತಿಯನ್ನು ಹೆಜ್ಜೆ ಮತ್ತು ಮಲ–ಮೂತ್ರ ಆಧರಿಸಿ ಮಾಡಲಾಗುತ್ತಿತ್ತು. 2013ರಿಂದ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಹುಲಿ ಚಿತ್ರ ಸೆರೆ ಹಿಡಿದು ಮೈಮೇಲಿನ ಪಟ್ಟೆಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ ಸಂಖ್ಯೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದರು.
‘648 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿದ್ದ ಸಂರಕ್ಷಿತಾರಣ್ಯದಲ್ಲಿ ಹುಲಿ ಸಂಖ್ಯೆ ಹೆಚ್ಚಿದಂತೆ ಪ್ರಾದೇಶಿಕ ಅರಣ್ಯ ಇಲಾಖೆ ಸ್ವಾಧೀನದಲ್ಲಿದ್ದ 200 ಚದರ ಕಿ.ಮೀ ಅರಣ್ಯವನ್ನು ನಾಗರಹೊಳೆ ಅರಣ್ಯಕ್ಕೆ 2019ರಲ್ಲಿ ಹಸ್ತಾಂತರಿಸಲಾಗಿದೆ. ಹುಲಿ ಫೌಂಡೇಶನ್ ಹಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ 400 ಸಿಬ್ಬಂದಿಗೆ ವೇತನ, ವಾಹನ ನಿರ್ವಹಣೆಗೆ ₹9 ಕೋಟಿ ವೆಚ್ಚವಾಗುತ್ತಿದೆ. ಅರಣ್ಯದಲ್ಲಿ ನಿತ್ಯ 2,539 ಕಿ.ಮೀ ಗಸ್ತು ತಿರುಗಲು ಇಂಧನ ಮತ್ತು ವಾಹನ ನಿರ್ವಹಣೆಗೆ ಹಣಕಾಸಿನ ಕೊರತೆ ಇದೆ’ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ
ಹುಲಿ ಯೋಜನೆ ಜಾರಿಯಾದ ಬಳಿಕ ಅರಣ್ಯದತ್ತ ಪ್ರವಾಸಿಗರ ಸಂಖ್ಯೆ ಏರುತ್ತಿದ್ದು, 2022ರಲ್ಲಿ 1.66 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದರಿಂದ ಶುಲ್ಕ ₹11.60 ಕೋಟಿ ಸಂಗ್ರಹವಾಗಿದೆ.
‘ನಾಗರಹೊಳೆ ಹುಲಿ ಯೋಜನಾಧಿಕಾರಿ ಕಚೇರಿಗೆ 2022ರಲ್ಲಿ ₹15.45 ಕೋಟಿ ಅನುದಾನ ಕೇಳಲಾಗಿತ್ತು. ಇದರಲ್ಲಿ ₹8 ಕೋಟಿ ಬಿಡುಗಡೆಯಾಗಿದೆ. 2023ನೇ ಸಾಲಿನಲ್ಲಿ ₹16 ಕೋಟಿ ಕೇಳಲಾಗಿದ್ದು, ಇನ್ನೂ ಬಿಡುಗಡೆಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ ಹುಲಿ ದಿನ ಇಂದು ನಾಗರಹೊಳೆ: ಹುಲಿ ಸಾಂದ್ರತೆ ಏರಿಕೆ ಹುಲಿ ಸಂರಕ್ಷಣೆಗೆ ಹೆಸರಾದ ಉದ್ಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.