ADVERTISEMENT

ಭ್ರಮಾಧೀನ ಪ್ರಧಾನಿ: ದೇಶದ ದುರಂತ: ಸಾಹಿತಿ ದೇವನೂರ ಮಹಾದೇವ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 20:58 IST
Last Updated 18 ಏಪ್ರಿಲ್ 2024, 20:58 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: 'ದೇಶದ ಚುಕ್ಕಾಣಿ ಹಿಡಿದವರು ವಾಸ್ತವದ ಅರಿವಿಲ್ಲದ ಭ್ರಮಾಧೀನರಾಗಬಾರದು. ಪ್ರಧಾನಿಯೇ ಭ್ರಮಾಧೀನರಾದರೆ, ಅದು ಒಬ್ಬ ವ್ಯಕ್ತಿಯ ದುರಂತವಲ್ಲ, ಈ ಭಾರತದ ಘೋರ ದುರಂತ’ ಎಂದು ಚಿಂತಕ ದೇವನೂರ ಮಹಾದೇವ ಟೀಕಿಸಿದರು.

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟವನ್ನು ಸೋಲಿಸಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘವು ಹಮ್ಮಿಕೊಂಡಿರುವ ಅಭಿಯಾನದ ಕರಪತ್ರಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದೇಶದಲ್ಲಿ ಎಂಎಸ್‌ಪಿ ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತದೆ ಎನ್ನುತ್ತಾರೆ ಪ್ರಧಾನಿ. ಸ್ವಾಮಿನಾಥನ್‌ ಆಯೋಗದ ಪ್ರಕಾರ ಬೆಂಬಲ ಬೆಲೆ ಯೋಜನೆ ದೇಶದಲ್ಲಿಲ್ಲ ಎಂದು ರೈತರು ಹೇಳುತ್ತಾರೆ. ಎಂಎಸ್‌ಪಿ ಇಲ್ಲದಿದ್ದರೂ ಇದೆ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದರೆ ಅವರು ವಾಸ್ತವದಲ್ಲಿ ಜೀವಿಸದ ಭ್ರಮಾಧೀನಾಗಿ ಬಿಡುತ್ತಾರೆ’ ಎಂದರು.

ADVERTISEMENT

‘ಎಂಎಸ್‌ಪಿ ಇದ್ದಿದ್ದರೆ ದೇಶದ ರಾಜಧಾನಿಯಲ್ಲಿ ರೈತರು ವರ್ಷಗಟ್ಟಲೆ ಹೋರಾಡಬೇಕಾಗುತ್ತಿರಲಿಲ್ಲ. ಬಂಡವಾಳಿಗರಿಗೆ ಜಮೀನು ಮಾರಿಕೊಂಡು ನಗರಗಳಿಗೆ ಗುಳೆ ಹೋಗಿ ಕೂಲಿಯಾಳುಗಳಾಗುತ್ತಿರಲಿಲ್ಲ. ಬಡವರಿಗೆ ವಚನ ಭ್ರಷ್ಟ, ಬಂಡವಾಳಿಗರಿಗೆ ನಿಷ್ಠರಾದವರು ಮತ್ತೆ ಈ ದೇಶದ ಚುಕ್ಕಾಣಿ ಹಿಡಿಯಬಾರದು’ ಎಂದರು.

‘ಎಂಎಸ್‌ಪಿ ಹೆಚ್ಚಳ ಮಾಡುವುದಾಗಿ ಬಿಜೆಪಿ ಹೇಳಿದೆ. ಕಾಂಗ್ರೆಸ್ ಕೂಡ ಕಾನೂನಾತ್ಮಕವಾಗಿ ಜಾರಿಗೊಳಿಸುವುದಾಗಿ ಹೇಳಿದೆ. ಹೇಳಿದ್ದನ್ನು ಮಾಡದಿದ್ದರೆ ಕಾಂಗ್ರೆಸ್ ಕತ್ತಿನ ಕಟ್ಟಿ ಹಿಡಿದು ಕೇಳಬಹುದು. ಆದರೆ ಬಿಜೆಪಿ ಮೈಗೆಲ್ಲ ಹರಳೆಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ಅಖಾಡಕ್ಕೆ ಇಳಿದಿರುವುದರಿಂದ, ಅದರೊಂದಿಗೆ ಕುಸ್ತಿ ಕಷ್ಟ’ ಎಂದರು.

‘ವಿಕಸಿತ ಭಾರತದ ಹಗಲುಗನಸು ಕಾಣುತ್ತಿರುವ ಪ್ರಧಾನಿಗೆ ಈ ನೆಲದ ಬರ, ನೀರಿಗಾಗಿ ಹಾಹಾಕಾರ, ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಜೀವನ ಕಾಣುತ್ತಿಲ್ಲ. ಇಂಥವರಿಗೆ ತನ್ನ ರಥಚಕ್ರಕ್ಕೆ ಸಿಲುಕಿ ಸಾಯುವ ತನ್ನ ಪ್ರಜೆಗಳ ಆಕ್ರಂದನವೂ ದೇಶಸೇವೆಯಲ್ಲಿ ಯಜ್ಞ ಎಂಬಂತೆ ಕಾಣುತ್ತದೆ. ತಾನು ಮಾಡುವ ಚುನಾವಣಾ ಬಾಂಡ್‌ನಂತಹ ಭ್ರಷ್ಟತೆಯೂ ದೇಶಸೇವೆಯಾಗಿ ಕಾಣಿಸುತ್ತದೆ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಈಡೇರಿಸುವುದೇ ಬಿಜೆಪಿಯ ‌ಕೆಲಸವೆಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ತನ್ನ ಕಾರ್ಯಸೂಚಿಯನ್ನು ತಾನೇ ರೂಪಿಸದ ಬಿಜೆಪಿ ಹೇಗೆ ರಾಜಕೀಯ ಪಕ್ಷವಾಗುತ್ತದೆ? ಬಿಜೆಪಿ ರಾಜಕಾರಣವೆಂದರೆ ಆರ್‌ಎಸ್‌ಎಸ್‌ ಕೈಚಳಕದ ತೊಗಲುಗೊಂಬೆಯಾಟ. ತಳ ಸಮದಾಯದ ಜನರನ್ನು ಸೇವಕರನ್ನಾಗಿಸಿಕೊಳ್ಳುವ ಅಜೆಂಡಾ ವಿರುದ್ಧ ಜನ ಮತ ಚಲಾಯಿಸಬೇಕು’ ಎಂದು ಕೋರಿದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವ ಅಧ್ಯಕ್ಷ ಚಾಮರಸ ಮಾಲೀಪಾಟೀಲ, ಮುಖಂಡರಾದ ರವಿಕಿರಣ್‌, ಹೊಸೂರು ಕುಮಾರ್, ವಿಜೇಂದ್ರ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.