ADVERTISEMENT

ರೌಡಿಶೀಟರ್‌ಗೆ ಟಿಕೆಟ್ ಕೊಟ್ಟು ದೇಶಕ್ಕೆ ದ್ರೋಹ ಬಗೆದ ಬಿಜೆಪಿ: ಇಂದೂಧರ ಹೊನ್ನಾಪುರ

ಪ್ರತಿಭಟನೆಯಲ್ಲಿ ಸಾಹಿತಿ ದೇವನೂರ ಮಹಾದೇವ

​ಪ್ರಜಾವಾಣಿ ವಾರ್ತೆ
Published 8 ಮೇ 2023, 11:50 IST
Last Updated 8 ಮೇ 2023, 11:50 IST
   

ಮೈಸೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿರುವ ರೌಡಿಶೀಟರ್‌ ಹಾಗೂ ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಇಲ್ಲಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್‌ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಾಹಿತಿ ದೇವನೂರ ಮಹಾದೇವ ಮಾತನಾಡಿ, ‘ರೌಡಿ ಶೀಟರ್‌ ಹೇಳಿಕೆ ನೀಡಿರುವ ವಿಡಿಯೊ ಭಯ ಹುಟ್ಟಿಸುತ್ತದೆ. ಆತ ಭಯೋತ್ಪಾದಕನಲ್ಲವಾ? ಇಂತಹ ವ್ಯಕ್ತಿಗಳು ಸಮಾಜಕ್ಕೆ ಕಂಟಕ. ಅವನ ಬಗ್ಗೆ ಈಗ ಯಾರು ಜೈ ಜೈ ಎನ್ನುತ್ತಿದ್ದಾರೆಯೋ ಅವರಿಗೆ, ಆ ಪಕ್ಷಕ್ಕೆ ಹಾಗೂ ಗೆಲ್ಲಿಸುವವರಿಗೂ ಕಂಟಕ ಆಗುತ್ತಾನೆ. ಆತನ ಮೇಲೆ ವಯಸ್ಸಿಗಿಂತಲೂ ಹೆಚ್ಚು ಕೇಸ್ ಇವೆ. ಇಂತಹ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದಕ್ಕೆ ಏನೆಂದು ಹೇಳುವುದು? ಬಿಜೆಪಿಯ ಅವನತಿ ಎಂದು ಹೇಳಬೇಕಾಗುತ್ತದೆ’ ಎಂದರು.

‘ಚುನಾವಣಾ ಆಯೋಗ ಹಾಗೂ ಪೊಲೀಸ್ ವ್ಯವಸ್ಥೆ ಸರ್ಕಾರದ ಕಾಲಾಳುಗಳಂತೆ ಇದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆಗೆ ಏನಾಗಿದೆ? ವಿಡಿಯೊ ಹರಡುತ್ತಿದ್ದಂತೆಯೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆ ರೌಡಿಶೀಟರ್‌ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಿಲ್ಲವೇಕೆ? ಈ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೂ ಕುಸಿದಿದೆ’ ಎಂದು ಆರೋಪಿಸಿದರು.

ADVERTISEMENT

ರಾಮನನ್ನು ಒಬ್ಬಂಟಿ ಮಾಡಿದ್ದಾರೆ: ‘ಬಜರಂಗ ದಳವಿರಲಿ, ಪಿಎಫ್‌ಐ ಇರಲಿ ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಹನುಮನಿಗೆ ಅಗೌರವ ತೋರಿದರು ಎಂದು ಆಕ್ರೋಶಭರಿತವಾಗಿ ಮಾತನಾಡುತ್ತಾರೆ, ಇವಿಎಂ ಬಟನ್ ಒತ್ತುವಾಗ ಜೈ ಜಜರಂಗ ಬಲಿ ಎನ್ನುವಂತೆ ಕರೆ ಕೊಡುತ್ತಾರಲ್ಲಾ?!’ ಎಂದು ಕಳವಳ ವ್ಯಕ್ತಪಡಿಸಿದರು.

‘ಹನುಮಂತ ಹಾಗೂ ಶ್ರೀರಾಮನನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಹಾಗೆಲ್ಲಾ ಹೇಳುತ್ತಿರಲಿಲ್ಲ. ಹನುಮ ಪರಮ ಭಕ್ತಿಯ ಪ್ರತೀಕ. ಶ್ರೀರಾಮ ವಚನಪಾಲನೆಗೆ ಪ್ರತೀಕ. ವಚನ ಭ್ರಷ್ಟರಾದರೆ ರಾಮನ ಬಗ್ಗೆ ಮಾತನಾಡಲಾಗದು’ ಎಂದರು.

‘ಹಿಂದೆ ನಮಗೆಲ್ಲ ರಾಮನ ಕಲ್ಪನೆ ಹೇಗಿತ್ತು? ರಾಮನೊಂದಿಗೆ ಲಕ್ಷ್ಮಣ, ಸೀತೆ ಇರುತ್ತಿದ್ದರು ಹಾಗೂ ಒಂದು ಬದಿಯಲ್ಲಿ ಹನುಮಂತ ಕುಳಿತಿರುತ್ತಿದ್ದ. ಆದರೆ, ಇವರು ರಾಮನನ್ನು ಒಬ್ಬಂಟಿ ಮಾಡಿ ಬಾಣ ಕೊಟ್ಟು ನಿಲ್ಲಿಸಿದ್ದಾರೆ. ಹನುಮಂತನನ್ನು ಗರ್ಜಿಸುವ ವ್ಯಾಘ್ರನಂತೆ ಮಾಡಿದ್ದಾರೆ. ಸೀತೆಯನ್ನು ಆಚೆ ತಳ್ಳಿದ್ದಾರೆ. ನಮ್ಮ ಸಂಸ್ಕೃತಿಯ ನಾಶಕರಿವರು’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.‌

‘ಮಲ್ಲಿಕಾರ್ಜುನ ಖರ್ಗೆ ಅವಕಾಶವಾದಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದು ಕೇಳಿ ಅಚ್ಚರಿಯಾಯಿತು. ಆ ರೀತಿ ಹೇಳಿಕೆ ಕೊಡಲು ಅವರಿಗೆ ನಾಲಿಗೆ ಹೇಗೆ ಬಂತು? ಖರ್ಗೆ ಅವರದ್ದು ಘನವಾದ ವ್ಯಕ್ತಿತ್ವ. ತತ್ವ ಹಾಗೂ ಪಕ್ಷ ನಿಷ್ಠೆ ಹೊಂದಿರುವವರು. ಅವರು ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳಿವೆ. ಅಂತಹ ಘನ ವ್ಯಕ್ತಿತ್ವದ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ‘ಖರ್ಗೆ ಕುಟುಂಬ ಸರ್ವನಾಶ ಮಾಡುತ್ತೇನೆ ಎಂಬುದು ರಾಠೋಡ್ ಒಬ್ಬನ ಬಾಯಿಯಿಂದಷ್ಟೇ ಬಂದಿಲ್ಲ. ಬಿಜೆಪಿ ಸರ್ಕಾರದ ಹೃದಯದಲ್ಲಿರುವ ವಿಷವನ್ನು ಆತ ‌ಕಾರಿಕೊಂಡಿದ್ದಾನೆ. ಆ ಪಕ್ಷದವರು ರೌಡಿಶೀಟರ್‌ಗೆ ಟಿಕೆಟ್ ಕೊಟ್ಟು ದೇಶಕ್ಕೆ ದ್ರೋಹ ಬಗೆದಿದೆ. ಈ ಸರ್ಕಾರವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ‌ಪ್ರಪಾತಕ್ಕೆ ತಳ್ಳಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೌಡಿಶೀಟರ್‌ ವಿರುದ್ಧ ಕ್ರಮ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಂಟುನೆಪ ಹೇಳುತ್ತಿರುವುದು ಖಂಡನೀಯ. ಚುನಾವಣೆ ‌ಹೊಸ್ತಿಲಲ್ಲಿ ನಡೆದಿರುವ ಘಟನೆಯ ಬಗ್ಗೆ ಆಯೋಗವೂ ಕ್ರಮ ವಹಿಸಿಲ್ಲ. ಕಂಡೂ ಕಾಣದಂತೆ ಮೌನವಾಗಿದೆ’ ಎಂದು ದೂರಿದರು. ‘ಕೂಡಲೇ ಆತನ ಉಮೇದುವಾರಿಕೆ ಅಮಾನ್ಯಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಇಂತಹ ಬೆದರಿಕೆಗಳನ್ನು ದಲಿತರು, ಹಿಂದುಳಿದ ವರ್ಗದವರು, ತಳ ಸಮುದಾಯದವರು ಸಹಿಸುವುದಿಲ್ಲ ಹಾಗೂ ಕ್ಷಮಿಸುವುದಿಲ್ಲ. ದಲಿತ ಅಸ್ಮಿತೆಗೆ ಹಾಗೂ ಸ್ವಾಭಿಮಾನಕ್ಕೆ ಕೈಹಾಕಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು’ ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ‘ಬಿಜೆಪಿಯವರಿಗೆ ಬ್ಯಾಲೆಟ್ ಪೇಪರ್ ಮೂಲಕ ಉತ್ತರ ಕೊಡಬೇಕು’ ಎಂದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಯೋಜಕ ವಿ.ನಾಗರಾಜ್‌, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಮುಖಂಡರಾದ ಕುಟ್ಟೆ ನಾಗರಾಜ್, ವರದಯ್ಯ, ಶಿವಲಿಂಗಯ್ಯ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.