ADVERTISEMENT

ಸಂದರ್ಶನ | ಪರಂಪರೆ ರಕ್ಷಣೆ, ಪ್ರವಾಸೋದ್ಯಮಕ್ಕೆ ಒತ್ತು: ಸಂಸದ ಯದುವೀರ್‌ ಒಡೆಯರ್

ಎಂ.ಮಹೇಶ
Published 9 ಜೂನ್ 2024, 6:49 IST
Last Updated 9 ಜೂನ್ 2024, 6:49 IST
   

ನಿಮ್ಮ ಗೆಲುವಿಗೆ ಕಾರಣವಾದ ಅಂಶಗಳೇನು?

ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಿಂದ ನೀಡಿದ ಜನಪರ ಆಡಳಿತ. ಮೈಸೂರು ಮಹಾರಾಜರು ಮಾಡಿದ್ದ ಅಭಿವೃದ್ಧಿ. ಸಮಾಜದ ‍ಸ್ಥಿತಿ ಸುಧಾರಿಸಲು ಕ್ರಮ ಕೈಗೊಂಡಿದ್ದುದು. ಒಳ್ಳೆಯ ಸಂಸ್ಥೆಗಳನ್ನು ಸ್ಥಾಪಿಸಿ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ್ದರು. ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದಲೂ ಲಾಭವಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇದೆಲ್ಲವೂ ನೆರವಾಗಿದೆ.

ಗೆದ್ದಾಯಿತು, ಮುಂದಿನ ಕಾರ್ಯ ಯೋಜನೆ ಏನು?

ADVERTISEMENT

ಕೇಂದ್ರದಿಂದ ಅನೇಕ ಯೋಜನೆಗಳಿವೆ. ಅವು ಯಾವ ಹಂತದಲ್ಲಿವೆ ಎಂಬುದರ ಪ್ರಗತಿ ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ಕ್ರಮ ವಹಿಸುವೆ. ಅವುಗಳಿಂದ ಜನರಿಗೆ ಲಾಭವಾಗುವಂತೆ ಮಾಡಬೇಕಿದೆ. ಪರಂಪರೆ ರಕ್ಷಣೆ, ಪರಿಸರ, ಸ್ವಚ್ಛತೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವೆ.

ಮೈಸೂರಿನವರೇ ಮುಖ್ಯಮಂತ್ರಿ. ಅವರ ಸಹಕಾರ ಪಡೆಯುವಿರಾ? 

ಚುನಾವಣೆ ಮುಗಿದ ನಂತರ ನಾವೆಲ್ಲರೂ ಮುತ್ಸದ್ದಿಯಂತೆ ಕೆಲಸ ಮಾಡಬೇಕು. ಪ್ರತಿಪಕ್ಷದವರ ದಾರಿ ಬೇರೆ ಇರುತ್ತದೆ. ಅವರೂ ಜನಪ್ರತಿನಿಧಿ ಗಳೇ. ಎಲ್ಲರೊಂದಿಗೂ ಕೈಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಸವಾಲುಗಳು ಎದುರಾದರೆ ಅವುಗಳನ್ನು ಮೀರಿ ಕೆಲಸ ಮಾಡುವೆ. 

ಬಿಜೆಪಿ–ಜೆಡಿಎಸ್‌ ಪಕ್ಷಗಳ ನಡುವೆ ಸಮನ್ವಯ ಕಾಯ್ದುಕೊಂಡು ಹೋಗಬೇಕಾದ ಸವಾಲಿದೆಯಲ್ಲವೇ?

ಎಲ್ಲರೂ ಸಮನ್ವಯದಿಂದ ಕೆಲಸ ಮಾಡುತ್ತೇವೆ. ಹೊಂದಾಣಿಕೆಯೂ ಇದ್ದು, ಮುಂದುವರಿಯುತ್ತದೆ. ಮೈತ್ರಿಯಿಂದ ಲೋಕಸಭೆ ಚುನಾವಣೆ ಜೊತೆಗೆ ವಿಧಾನಪರಿಷತ್‌ ಚುನಾವಣೆಯಲ್ಲೂ ಎರಡೂ ಪಕ್ಷಗಳಿಗೂ ಅನುಕೂಲವಾಗಿದೆ.

ಮೈಸೂರು– ಕುಶಾಲನಗರ ರೈಲು ಮಾರ್ಗ ಸೇರಿದಂತೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆಯಲ್ಲಾ?

ಎಲ್ಲವೂ ಗಮನದಲ್ಲಿವೆ. ಅನುಷ್ಠಾನಕ್ಕೆ ಅಥವಾ ವೇಗ ನೀಡಲು ಕ್ರಮ ವಹಿಸುವೆ. ಯಾವ್ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬುದನ್ನು ತಿಳಿದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಿದ್ದೇನೆ. 

ಮೈಸೂರು ನಗರವು ಕೇಂದ್ರದ ವಿಶೇಷ ಯೋಜನೆಗೆ ಆಯ್ಕೆಯಾಗಲಿಲ್ಲ ಎಂಬ ಬೇಸರ ಜನರಲ್ಲಿದೆಯಲ್ಲಾ?

ಈ ಹಂತದಲ್ಲಿ ವಿಶೇಷ ಯೋಜನೆಗಳ ಬಗ್ಗೆ ಹೇಳಲಾರೆ. ಎಲ್ಲವನ್ನೂ ತಿಳಿದುಕೊಂಡು ನಂತರ ಜನರಿಗೆ ತಿಳಿಸುವೆ.

ಪರಂಪರೆ ಉಳಿಸಲು ನಿಮ್ಮ ಯೋಜನೆ ಏನು?

ಪರಂಪರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ ಅನೇಕ ಯೋಜನೆಗಳಿವೆ. ಅವುಗಳನ್ನು ತಂದು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. 

ಜಲ ಜೀವನ ಮಿಷನ್‌ ಸಮರ್ಪಕ ಅನುಷ್ಠಾನಕ್ಕೇನು ಮಾಡುತ್ತೀರಿ?

ಆ ಯೋಜನೆಯಲ್ಲಿ ಕೈಗೊಂಡಿರುವ ಕೆಲಸಗಳ ಪ್ರಗತಿ ಪರಿಶೀಲಿಸುವೆ. ಯೋಜನೆಯ ಅನುಷ್ಠಾನ ಚುರುಕುಗೊಳಿಸಲು ಮುಂದಾಗುವೆ.

ಉದ್ಯೋಗ ಸೃಷ್ಟಿ, ಕೈಗಾರಿಕೆ ಪ್ರಗತಿಗೆ ನಿಮ್ಮದೇನು ಆಲೋಚನೆ?

ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು. ಮೈಸೂರನ್ನು ಮೈಸೂರಾಗಿಯೇ ಉಳಿಸಿಕೊಂಡು ಪರಂಪರೆಗೆ ಧಕ್ಕೆ ಆಗದ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಕೊಡಗನ್ನೂ ನೈಸರ್ಗಿಕವಾಗಿ ಉಳಿಸಿಕೊಂಡು ಅಭಿವೃದ್ಧಿಪಡಿಸಬೇಕಾಗುತ್ತದೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಯೋಜನೆ ಬೇಡ ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ವಿಮಾನ ನಿಲ್ದಾಣ ಪ್ರಗತಿ ಕಂಡಿಲ್ಲವಲ್ಲ?

ಹೌದು. ಮೈಸೂರು ವಿಮಾನ ನಿಲ್ದಾಣ 2010ರಿಂದ ಹೆಚ್ಚು ಅಭಿವೃದ್ಧಿ ಕಂಡಿಲ್ಲ. ಸದ್ಯ ಚೆನ್ನೈಗೆ ಮಾತ್ರ ವಿಮಾನವಿದೆ. ಅನೇಕ ನಗರಗಳಿಗೆ ಸಂಪರ್ಕ ಕಲ್ಪಿಸಬೇಕಿದೆ. ರನ್‌ ವೇ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲಾಗುವುದು. ಕೈಗಾರಿಕೆಗಳ ಬೆಳವಣಿಗೆಗೆ, ಆರ್ಥಿಕತೆ ವೃದ್ಧಿಗೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಮೈಸೂರಿನಲ್ಲೂ ಸಭೆ ನಡೆಸಿ ಪರಿಶೀಲಿಸುವೆ. ರೈಲು ಸೇವೆ ಸುಧಾರಣೆಗೂ ಕ್ರಮ ವಹಿಸುವೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ನಿಮ್ಮ ಕಲ್ಪನೆಗಳೇನು?

ಮೈಸೂರು ಪ್ರವಾಸೋದ್ಯಮಕ್ಕೆ ಹೆಸರುವಾಸಿ ಹಾಗೂ ತನ್ನದೇ ಆದ ಐಡೆಂಟಿಟಿ ಪಡೆದಿದೆ. ಅದನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕು. ವಿಮಾನ ನಿಲ್ದಾಣ, ರೈಲು ಸೇವೆ ಬಲಪಡಿಸಬೇಕು. ಪ್ರವಾಸಿಗರ ವಾಸ್ತವ್ಯಕ್ಕೆ ಹೋಟೆಲ್‌ ಮೊದಲಾದವು ಇನ್ನೂ ಜಾಸ್ತಿ ಬೇಕು. ಅದಕ್ಕೂ ಪ್ರೋತ್ಸಾಹ ಕೊಡಲಾಗುವುದು. ಪ್ರವಾಸೋದ್ಯಮಕ್ಕೆ ಒತ್ತು ಇದ್ದೇ ಇರುತ್ತದೆ.

ಜನರಿಗೆ ಸುಲಭವಾಗಿ ಸಿಗಲು ಏನು ಮಾಡುತ್ತೀರಿ?

ಈಗಾಗಲೇ ಕುವೆಂಪುನಗರದಲ್ಲಿ ಕಚೇರಿ ತೆರೆದಿದ್ದೇನೆ. ಅಲ್ಲಿಗೆ ಜನ ಭೇಟಿ ನೀಡುತ್ತಿರುತ್ತಾರೆ. ಸರ್ಕಾರಿ ಕಚೇರಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು. ಕೊಡಗಿನಲ್ಲೂ ಕಚೇರಿ ತೆರೆದು ಜನರ ಸಮಸ್ಯೆಗಳಿಗೆ ಸ್ಪಂದಿಸುವೆ. ಪಿಎಗಳು ಇರಲಿದ್ದಾರೆ. ಅವರು ಎಲ್ಲವನ್ನೂ ಸ್ವೀಕರಿಸುತ್ತಾರೆ. ಇ–ಮೇಲ್‌, ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿರಲು ಅವಕಾಶವಿದೆ. ಕೊಡಗು ಜಿಲ್ಲೆಗೂ ಆಗಾಗ ಭೇಟಿ ಕೊಡುವುದು ನನ್ನ ಜವಾಬ್ದಾರಿ.

ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಥಮ ‍ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ಎರಡೂ ಜಿಲ್ಲೆಗಳ ಅಭಿವೃದ್ಧಿ ವಿಷಯದಲ್ಲಿ ಹಲವು ಕನಸುಗಳಿವೆ. ‘ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಧಿಕೃತವಾಗಿ ಅಧಿಕಾರಿಗಳ ಸಭೆ ನಡೆಸಿ ಎಲ್ಲ ಯೋಜನೆಗಳ ಮಾಹಿತಿ ಪಡೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ. ‍ಪ್ರವಾಸೋದ್ಯಮ ಅಭಿವೃದ್ಧಿ, ಪರಂಪರೆ ರಕ್ಷಣೆ ಹಾಗೂ ಸಂಪರ್ಕ ಸುಧಾರಣೆ ನನ್ನ ಪ್ರಥಮ ಆದ್ಯತೆ ಆಗಿರಲಿದೆ’ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.