ಎಂ.ಮಹೇಶ
ಮೈಸೂರು: ರಾಜ್ಯದಲ್ಲಿ 2022–23ನೇ ಸಾಲಿನಿಂದ ಮರು ಜಾರಿಗೊಳಿಸಲಾದ ‘ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ’ಯಡಿ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಆರೋಗ್ಯ ಸೇವೆ ಪಡೆದುಕೊಳ್ಳಲು ಸಹಕಾರಿಗಳು ಮುಂದೆ ಬಂದಿದ್ದಾರೆ.
ಇದೇ ವರ್ಷದ ಜನವರಿ 1ರಿಂದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ.
ಯೋಜನೆಯಡಿ ಇದುವರೆಗೆ ರಾಜ್ಯದಾದ್ಯಂತ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ 474 ನೆಟ್‌ವರ್ಕ್ ಆಸ್ಪತ್ರೆಗಳು ಯಶಸ್ವಿನಿ ಟ್ರಸ್ಟ್‌ನಲ್ಲಿ ನೋಂದಾಯಿಸಿಕೊಂಡಿವೆ. ಜಿಲ್ಲೆಯಲ್ಲಿ 30 ನೆಟ್‌ವರ್ಕ್ ಆಸ್ಪತ್ರೆಗಳಿವೆ. ಜೆಎಸ್‌ಎಸ್ ಆಸ್ಪತ್ರೆಯನ್ನೂ ಯೋಜನೆಯಡಿ ಒಳಗೊಳಿಸುವಂತೆ ಸಹಕಾರ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಬಿಜಿಎಸ್ ಅಪೋಲೊ ಹಾಗೂ ನಾರಾಯಣ ಹೃದಯಾಲಯ ಈ ಪಟ್ಟಿಯಲ್ಲಿಲ್ಲ. ಉಳಿದಂತೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಜೋಡಿಸಲಾಗಿದೆ.
ಹೃದಯ ಸಂಬಂಧಿ ಕಾಯಿಲೆ, ಕಿವಿ, ಮೂಗು, ಗಂಟಲು, ನರ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಹಲವು ರೋಗಗಳಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಸದಸ್ಯರು ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡ್ ಹಾಜರುಪಡಿಸಿ 1,650 ಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಸಹಕಾರ ಸಂಘ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರನ್ನು ಪ್ರಧಾನ ಅರ್ಜಿದಾರರಾಗಿ ಪರಿಗಣಿಸಿ, ಅವರ ಕುಟುಂಬದ ಉಳಿದ 9 ಜನ ಸದಸ್ಯರನ್ನು ಯೋಜನೆಗೆ ಒಳಪಡಿಸಲಾಗುತ್ತದೆ. ಎರಡೂ ಸಂಸ್ಥೆಗಳಲ್ಲಿ ಸದಸ್ಯರಾದ ಪ್ರಮುಖ ಅರ್ಜಿದಾರರನ್ನು ಒಳಪಟ್ಟು ಉಳಿದ ಮೂವರ (ಒಟ್ಟು ನಾಲ್ವರು) ಒಂದು ಕುಟುಂಬ ವಾರ್ಷಿಕ ₹500 ವಂತಿಗೆ ಭರಿಸಬೇಕಾಗುತ್ತದೆ. 4ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದ ಕುಟುಂಬ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ₹100 ವಂತಿಗೆ ನೀಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರ ವಂತಿಗೆಯನ್ನು ಸರ್ಕಾರ ಭರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
₹3.83 ಕೋಟಿ ಪಾವತಿ
‘ಜಿಲ್ಲೆಗೆ 1.50 ಲಕ್ಷ ಸದಸ್ಯರ (22,498 ಪರಿಶಿಷ್ಟ ಜಾತಿ ಹಾಗೂ 4,498 ಪರಿಶಿಷ್ಟ ವರ್ಗದವರು ಸೇರಿದಂತೆ) ನೋಂದಣಿ ಗುರಿ ನೀಡಲಾಗಿತ್ತು. ಆದರೆ, ವಿವಿಧ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳಿಂದ 1,73,389 ಪುರುಷರು ಹಾಗೂ 1,59,504 ಮಹಿಳೆಯರು ಸೇರಿದಂತೆ ಒಟ್ಟು 3.32 ಲಕ್ಷ ಮಂದಿ ನೋಂದಾಯಿಸಿದ್ದಾರೆ. ಇವರಿಂದ ₹3.98 ಕೋಟಿ ನೋಂದಣಿ ಶುಲ್ಕ ಸಂಗ್ರಹಿಸಲಾಗಿದೆ. ಈವರೆಗೆ 1,587 ಸದಸ್ಯರು ವೈದ್ಯಕೀಯ ಸೇವೆಗಳನ್ನು ಪಡೆದಿದ್ದಾರೆ. ಇದಕ್ಕಾಗಿ ₹3.83 ಕೋಟಿ ಮೊತ್ತವನ್ನು ಯಶಸ್ವಿನಿ ಟ್ರಸ್ಟ್‌ನಿಂದ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ’ ಎಂದು ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ.ಮಂಜುನಾಥ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ 2,591 ಸಹಕಾರ ಸಂಘಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.