ADVERTISEMENT

Year Ender 2022 | ಅಂತ್ಯ ಕಾಣದ ವನ್ಯಜೀವಿ– ಮಾನವ ಸಂಘರ್ಷ

ವರ್ಷದಲ್ಲಿ ಆರು ಮಂದಿ ಬಲಿ– ಜನರಿಗೆ ಜೀವಭಯ– ಅಧಿಕಾರಿಗಳಿಗೆ ಪೀಕಲಾಟ

ಬಾಲಚಂದ್ರ
Published 30 ಡಿಸೆಂಬರ್ 2022, 6:39 IST
Last Updated 30 ಡಿಸೆಂಬರ್ 2022, 6:39 IST
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಲಾಸ್ಯ ಹೆಸರಿನ ಜೀಬ್ರಾಗೆ ಮರಿ ಜನಿಸಿತು
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಲಾಸ್ಯ ಹೆಸರಿನ ಜೀಬ್ರಾಗೆ ಮರಿ ಜನಿಸಿತು   

ಮೈಸೂರು: ಈ ವರ್ಷದ ಆರಂಭದ ದಿನಗಳಿಂದಲೂ ಶುರುವಾದ ವನ್ಯಪ್ರಾಣಿ ಗಳ ದಾಳಿ, ಸಾವು– ನೋವುಗಳು ವರ್ಷಾಂತ್ಯದಲ್ಲಿಯೂ ಕೊನೆಯಾಗಿಲ್ಲ. ಪ್ರಾಣಿಗಳ ದಾಳಿಗೆ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಹುಲಿ, ಚಿರತೆ, ಆನೆಗಳ ದಾಳಿಯೂ ಮಾಮೂಲಿಯಾಗಿದೆ.

ಜ.1: ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪದ ನೂರಲಕುಪ್ಪೆ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮರುದಿನ ಅಂತರಸಂತೆ ಗ್ರಾಮದ ಗೋವಿಂದ ರಾಜು ಅವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿತ್ತು. ಇದಾದ ಎರಡು ದಿನಗಳ ಬಳಿಕ ಮಹದೇಶ್ವರ ದೇವಾಲಯದ ಹಿಂಭಾಗದ ಜಮೀನಿನಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿತ್ತು.

ಜ.5: ಬಂಡೀಪುರ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಮೊಳೆಯೂರು ಮತ್ತು ಎನ್.ಬೇಗೂರು ವಲಯಗಳ ವ್ಯಾಪ್ತಿಗೆ ಬರುವ ಕಾಟವಾಳು ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ, ರಾಗಿ, ಬಾಳೆ ಗಿಡಗಳನ್ನು ತುಳಿದು ನಾಶಗೊಳಿಸಿತ್ತು.

ADVERTISEMENT

ಜ.6: ಅಂತರಸಂತೆ ಗ್ರಾಮದಲ್ಲಿ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿ, ಎರಡು ದಿನಗಳ ಬಳಿಕ ಮಂಚನಾಯಕನಹಳ್ಳಿಯ ರವಿ ಎಂಬುವರ ಜಮೀನಿನಲ್ಲಿ ಕಾಣಿಸಿ ಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಹುಲಿ ಪೊದೆಗಳ ನಡುವೆ ಮರೆಯಾದ ಕಾರಣ, ಅರಿವಳಿಕೆ ನೀಡಿ ಸೆರೆ ಹಿಡಿಯುವ ಪ್ರಯತ್ನ ವಿಫಲವಾಯಿತು. ನಂತರ ಅರ್ಜುನ, ಮಹೇಂದ್ರ, ಗೋಪಾಲಸ್ವಾಮಿ ಮತ್ತು ರೂಪಾ ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಒಮ್ಮೆ ಕಾಣಿಸಿಕೊಂಡ ಹುಲಿ ಅಲ್ಪ ಕ್ಷಣದಲ್ಲೇ ತಾರಕ ನದಿ ಪಾತ್ರದಲ್ಲಿ ಕಣ್ಮರೆಯಾಯಿತು.

ಜ.7:ಎಚ್.ಡಿ.ಕೋಟೆ ತಾಲ್ಲೂಕಿನ ಮಂಚನಾಯಕನಹಳ್ಳಿಯ ರವಿ ಎಂಬುವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತು. ನಂತರ ಹೆಜ್ಜೆ ಗುರುತುಗಳ ಜಾಡು ಕುರುಚಲು ಕಾಡಿನಲ್ಲಿ ಕಣ್ಮರೆಯಾಯಿತು. ನಂತರ ಹುಲಿ ಕಾಣಿಸಲಿಲ್ಲ.

ಜ.10: ಹುಣಸೂರಿನ ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ ಹೊರಬಂದ ಕಾಡಾನೆ ಹಿಂಡನ್ನು ಲಕ್ಷ್ಮಣತೀರ್ಥ ನದಿಯ ನಾಲೆ ಮೂಲಕ ಕಾಡಿಗೆ ಅಟ್ಟಲಾಗಿತ್ತು. ನೀರು ಹರಿಯುತ್ತಿದ್ದ ನಾಲೆಯಲ್ಲಿ 6 ಕಾಡಾನೆಗಳು ಓಡುತ್ತಿರುವ ಹಾಗೂ ಗ್ರಾಮಸ್ಥರು ಜೋರಾಗಿ ಕೂಗುತ್ತಾ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಜ.16: ಎಚ್.ಡಿ.ಕೋಟೆ ತಾಲ್ಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಅರಣ್ಯ ವಲಯದ ಕಬಿನಿ ಹಿನ್ನೀರಿನ ನಾಯಳ್ಳಿ ಬೀಟ್‌ನಲ್ಲಿ ಹುಲಿಗಳ ನಡುವಣ ಕಾದಾಟದಲ್ಲಿ ಎಂಟು ವರ್ಷದ ಗಂಡು ಹುಲಿ ಮೃತಪಟ್ಟಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿಯ ಕಳೇಬರ ಪತ್ತೆಯಾಗಿತ್ತು. ಹುಲಿಯ ತಲೆ ಮೇಲೆ ಪರಚಿದ ಗಾಯ ಹಾಗೂ ಬೆನ್ನ ಹಿಂದೆ ಮಾಂಸ ಕಿತ್ತು ಬಂದಿತ್ತು.

ಜ.28: ಹುಣಸೂರಿನ ನಾಗರಹೊಳೆ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶ– ಮುತ್ತೂರು ವಲಯಕ್ಕೆ ಸೇರಿದ ಸುಳಗೂಡು ಗ್ರಾಮದಲ್ಲಿ ರೈತರ ಗುಂಡೇಟಿಗೆ ಹೆಣ್ಣಾನೆ ಮೃತ‍ಪಟ್ಟಿತ್ತು.ಆಹಾರ ಅರಸಿ ಬಂದಿದ್ದ ಆನೆಗಳ ಹಿಂಡು ಓಡಿಸಲು ರೈತರು ಹಾರಿಸಿದ ಗುಂಡು ತಗುಲಿ ಹೆಣ್ಣಾನೆಯು ರಕ್ತಸ್ರಾವದಿಂದ ರೇವಣ್ಣ ಎಂಬುವರ ಜಮೀನಿನಲ್ಲಿ ಮೃತಪಟ್ಟಿತ್ತು.

ಫೆ.1:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜ.23ರಿಂದ ಆರಂಭವಾದ ಅಖಿಲ ಭಾರತೀಯ ಹುಲಿ ಗಣತಿ ಕಾರ್ಯ ಫೆ.1ರಂದು ಅಂತ್ಯಗೊಂಡಿತ್ತು.

ನಾಗರಹೊಳೆ ಅರಣ್ಯಕ್ಕೆ ಸೇರಿದ 840 ಚದರ ಕಿ.ಮೀ. ವ್ಯಾಪ್ತಿಯಲ್ಲಿ 95 ಬೀಟ್‌ಗಳಲ್ಲಿ 106 ವಿಭಾಗದಲ್ಲಿ ಒಟ್ಟು 300 ಸಿಬ್ಬಂದಿ ನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ಹುಲಿ ಚಲನವಲನ ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ಮಲ ಸಂಗ್ರಹ, ಹೆಜ್ಜೆ ಗುರುತು ಸೇರಿದಂತೆ ವಿವಿಧ ಮಾಹಿತಿಯನ್ನು ಸಂಗ್ರಹಿಸಿ ಡೇಟಾದಲ್ಲಿ ಸಂರಕ್ಷಿಸಿಡಲಾಗಿತ್ತು.

ಫೆ.3: ಹುಣಸೂರು ತಾಲ್ಲೂಕಿನ ನಾಗಾ ಪುರ ಪುನರ್ವಸತಿ 6ನೇ ಬ್ಲಾಕ್‌ನಲ್ಲಿ ಬೆಳಗಿನ ಜಾವ ಕಾಣಿಸಿಕೊಂಡ ಒಂಟಿ ಸಲಗ ದಿನ ಪೂರ್ತಿ ಪುನರ್ವಸತಿ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ನಡೆಸಿದ ದಾಂದಲೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ಹೊರ ಬಂದ ಒಂಟಿ ಸಲಗ ನಡೆಸಿದ ದಾಳಿಯಲ್ಲಿ ಕೊಳವಿಗೆ ಗ್ರಾಮದ ನಿವಾಸಿ ರಾಜೇಶ್ (56) ಮೃತಪಟ್ಟಿದ್ದರು.

ಫೆ.11: ಹನಗೋಡು ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಕಾಡಂಚಿನ ಉಡುವೇಪುರ– ಅಯ್ಯನಕೆರೆ ಗಿರಿಜನ ಹಾಡಿಯ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಹುಲಿ ಕಾಣಿಸಿಕೊಂಡಿತು. ರಸ್ತೆಯಲ್ಲಿ ಹೋಗುತ್ತಿದ್ದ ಹುಲಿ ದಾರಿಹೋಕರನ್ನು ಕಂಡು ಅರಣ್ಯದ ಕಡೆ ಸಾಗಿತ್ತು.

ಮಾ.10: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಆನೆಚೌಕೂರು ವಲಯದ ಮತ್ತಿಗೋಡು ಬೀಟ್ ಚೇಣಿ ಹಡ್ಲು ಎಂಬಲ್ಲಿ 6ರಿಂದ 7 ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿತ್ತು.

ಏ.23: ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಲಾಸ್ಯ ಹೆಸರಿನ ಜೀಬ್ರಾಗೆ ಮರಿ ಜನಿಸಿತು. ಕಳೆದ 4 ತಿಂಗಳಲ್ಲಿ ಜನಿಸಿದ ಮೂರನೇ ಮರಿ ಇದಾಗಿತ್ತು.

ಮೇ 2: ಹುಣಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಲಯದಲ್ಲಿ ಬೇಟೆಯಾಡಿ ಚಿರತೆಯ ಚರ್ಮ ಮತ್ತು ಉಗುರು ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಬಂಧಿಸಲಾಗಿತ್ತು.

ಮೇ 9: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ 8 ವರ್ಷದ ತಾರಾ ಹೆಸರಿನ ಬಿಳಿ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿತು. ಸದ್ಯ ಮೃಗಾಲಯದಲ್ಲಿ 9 ಗಂಡು ಹುಲಿ, 8 ಹೆಣ್ಣು ಹುಲಿ ಹಾಗೂ ಮೂರು ಮರಿಗಳಿವೆ.

ಜೂನ್‌ 1: ಹನಗೋಡು ಹೋಬಳಿಯ ಮುದಗನೂರು ಗ್ರಾಮದಲ್ಲಿ ರಾಜೇಗೌಡರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದಿತ್ತು.

ಜೂ.11: ಆನೆಚೌಕೂರು ವಲಯದಲ್ಲಿ ಕೋಣನಕಟ್ಟೆ ಮಾರಪಾಲ ಬೀಟ್ ಬಳಿ ದ್ವಿಚಕ್ರ ವಾಹನದಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದ ಚಾಮ (48) ಎಂಬುವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಕಾಡಾನೆ ರಸ್ತೆಗೆ ಹಠಾತ್ತನೆ ಬಂದಿದ್ದರಿಂದ ಬೈಕ್‌ನಲ್ಲಿದ್ದವರು ಕೆಳಗೆ ಬಿದ್ದರು. ಈ ವೇಳೆ ಆನೆ ದಾಳಿ ನಡೆಸಿತ್ತು.

ಜೂ.4: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೋಣಿಗದ್ದೆ ಶಾಖೆಯ ಕುಂತೂರು ಗಸ್ತಿನಲ್ಲಿ 3 ವರ್ಷ ಪ್ರಾಯದ ಗಂಡು ಹುಲಿ ಮೃತಪಟ್ಟಿತ್ತು.

ಜುಲೈ 8: ಸರಗೂರು ಭಾಗದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯ ಹೀರೆಹಳ್ಳಿಯ ಜಮೀನಿನಲ್ಲಿ ಗಂಡಾನೆಯೊಂದು ಮೃತಪಟ್ಟಿತು.

ಹನಗೋಡು ಹೋಬಳಿಯ ಹುಣಸೇಗಾಲ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ನಾಗರಾಜೇಗೌಡ ಅವರ ಎರಡು ಹಸುಗಳ ಮೇಲೆ ಚಿರತೆ ದಾಳಿ ನಡೆಸಿ ಒಂದು ಹಸು ಮೃತಪಟ್ಟಿತ್ತು.

ಆ.7: ಹುಣಸೂರು ತಾಲ್ಲೂಕಿನ ಬಲ್ಲೇನ ಹಳ್ಳಿ ರೈತ ರಾಮದಾಸ್ ಎಂಬುವರ ಜಮೀನಿನಲ್ಲಿ ಗಂಡು ಚಿರತೆ ಬೋನಿಗೆ ಸೆರೆಯಾಯಿತು. ಹೊಸವಾರಂಚಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಚಿರತೆ ಬೋನಿಗೆ ಬಿದ್ದಿತು.

ಆ.12: ವನ್ಯಜೀವಿಧಾಮ ವಲಯ ಅರಣ್ಯ ವ್ಯಾಪ್ತಿಯಲ್ಲಿನ ಶುಂಠಿ ಜಮೀನಿ ನಲ್ಲಿ ಕೂಲಿ ಮಾಡುತ್ತಿದ್ದ ಕೇರಳದ ಬಾಲನ್ (60) ಕಾಡಾನೆ ದಾಳಿಗೆ ಮೃತಪಟ್ಟರು. ಕಾವಲು ಕಾಯುತ್ತಿದ್ದ ಪರಮೇಶ್ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಅವರು ಪಾರಾಗಿದ್ದರು.

ಆ.23: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಗಂಡು, ಎರಡು ಹೆಣ್ಣು ‘ಕೆಂಪು ಕತ್ತಿನ ವಾಲಬಿ’ ತಂದಿದ್ದು, ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.

ಸೆ.27: ತಿ.ನರಸೀಪುರ ತಾಲ್ಲೂಕಿನ ಹಸುವಟ್ಟಿ ಗ್ರಾಮದ ಬಳಿ ವಾಹನ ಡಿಕ್ಕಿ ಹೊಡೆದು 4ರಿಂದ 6 ತಿಂಗಳ ಪ್ರಾಯದ ಚಿರತೆ ಮರಿ ಮೃತಪಟ್ಟಿತು.

ಅ.31: ಬನ್ನೂರು ಸಮೀಪದ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಚಿರತೆ ದಾಳಿ ನಡೆಸಿ ಎಂ.ಎಲ್‌.ಹುಂಡಿ ಗ್ರಾಮದ ಮಂಜುನಾಥ್ (22) ಮೃತಪಟ್ಟರು.

ಡಿ.1: ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದರಿಂದ ಅರಣ್ಯ ಇಲಾಖೆ ಹುಲಿ ಸೆರೆಗೆ ಆನೆ ಮೂಲಕ ಕೂಂಬಿಂಗ್‌ ನಡೆಸಿತ್ತು.

ಡಿ.1: ತಿ. ನರಸೀಪುರ ತಾಲ್ಲೂಕಿನ ಎಸ್‌.ಕೆಬ್ಬೆಹುಂಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೇಘನಾ (22) ಎಂಬ ಯುವತಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.