ADVERTISEMENT

ಸಮಾಜದ ಸ್ವಾಸ್ಥ್ಯಕ್ಕೆ ಯೋಗ ಅವಶ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 7:11 IST
Last Updated 18 ಜೂನ್ 2024, 7:11 IST
<div class="paragraphs"><p>ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯು (ಆರ್‌ಐಇ) ಆಯೋಜಿಸಿರುವ 3 ದಿನಗಳ ’ರಾಷ್ಟ್ರೀಯ ಯೋಗ ಒಲಿಂಪಿಯಾಡ್‌’ ಅನ್ನು  ಉದ್ಘಾಟಿಸಿದ&nbsp;ಥಾವರ್‌ಚಂದ್ ಗೆಹಲೋತ್‌ &nbsp;</p></div>

ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯು (ಆರ್‌ಐಇ) ಆಯೋಜಿಸಿರುವ 3 ದಿನಗಳ ’ರಾಷ್ಟ್ರೀಯ ಯೋಗ ಒಲಿಂಪಿಯಾಡ್‌’ ಅನ್ನು ಉದ್ಘಾಟಿಸಿದ ಥಾವರ್‌ಚಂದ್ ಗೆಹಲೋತ್‌  

   

ಮೈಸೂರು: ’ಯೋಗವು ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತದೆ. ಯೋಗ, ಪ್ರಾಣಾಯಾಮಗಳು ಸಕಾರಾತ್ಮಕ ಆಲೋಚನೆ, ಕಾರ್ಯಗಳನ್ನು ಮಾಡಲು ನೆರವಾಗುತ್ತವೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಪ್ರತಿಪಾದಿಸಿದರು.

ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯು (ಆರ್‌ಐಇ) ಆಯೋಜಿಸಿರುವ 3 ದಿನಗಳ ’ರಾಷ್ಟ್ರೀಯ ಯೋಗ ಒಲಿಂಪಿಯಾಡ್‌’ ಅನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಯೋಗದಿಂದ ಸ್ವಯಂ ಪ್ರಯೋಜನವನ್ನು ಪಡೆದಿದ್ದೇನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿದ್ದಾಗ ಸೂರ್ಯ ನಮಸ್ಕಾರ ಹಾಗೂ ಪ್ರಾಣಯಾಮ ಮಾಡಿಸುತ್ತಿದ್ದರು. ಸಂಸ್ಕೃತಿ ಹಾಗೂ ಪರಂಪರೆ ಬಗ್ಗೆ ತಿಳಿಸುತ್ತಿದ್ದರು. ಅಂದಿನಿಂದಲೂ ಯೋಗವು ನನ್ನ ಜೀವನದ ಭಾಗವಾಗಿದೆ’ ಎಂದರು.

‘ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿದರೆ ವ್ಯಕ್ತಿತ್ವ ವಿಕಾಸವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಅದು ನೀಡುತ್ತದೆ’ ಎಂದರು.

‘ಭಾರತವು ವಿಶ್ವದ ಯೋಗ ಗುರು. ದೇಶದ ಸಂಸ್ಕೃತಿಯಲ್ಲಿ ಯೋಗಕ್ಕೆ ಪ್ರಮುಖವಾದ ಸ್ಥಾನವಿದೆ. ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲೂ ಯೋಗ ಕುರಿತು ಪ್ರಸ್ತಾಪಿಸಿದ್ದರು. ವಿಶ್ವಸಂಸ್ಥೆಯು ಜೂನ್‌ 21ಅನ್ನು ವಿಶ್ವ ಯೋಗ ದಿನವೆಂದು ಘೋಷಿಸಿದ್ದರಿಂದ ಯೋಗ ಶಿಕ್ಷಣಕ್ಕೆ ಜಾಗತಿಕ ಮಹತ್ವ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಸಶಕ್ತೀಕರಣವು ಈ ಬಾರಿಯ ಯೋಗ ದಿನಾಚರಣೆಯ ಧ್ಯೇಯ ವಾಕ್ಯ. ರಾಜ್ಯ ಸರ್ಕಾರವು ಮೈಸೂರಿನಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸವು ಗಿನ್ನಿಸ್‌ ದಾಖಲೆಗೆ ಸೇರಿದೆ. ‘ಮನೆಮನೆಗೆ ಯೋಗ’ ಅಭಿಯಾನವು ಯೋಗವನ್ನು ಎಲ್ಲರಿಗೂ ತಲುಪಿಸುತ್ತಿದೆ’ ಎಂದು ಹೇಳಿದರು.

ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ, ‘ರಾಷ್ಟ್ರೀಯ ಶಿಕ್ಷಣ ನೀತಿಯು ದೇಶಪ್ರೇಮ, ಏಕತೆಯನ್ನು ಎತ್ತಿ ಹಿಡಿಯುವ ನೀತಿಯಾಗಿದೆ. ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಿದೆ’ ಎಂದರು.

‘ಯೋಗ ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಇಡೀ ಮಾನವ ಕುಲದ ಅಭಿವೃದ್ಧಿಗಾಗಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯು ನೀಡಿದ ಕೊಡುಗೆಯಾಗಿದೆ. ನಮ್ಮ ದೇಸಿ ಜ್ಞಾನ ಪರಂಪರೆಯು ಅಸೀಮ, ಅಗಾಧವಾಗಿದ್ದು, ಬಾಯಿ ಮಾತಿನಲ್ಲಿ ಪರಂಪರೆಯ ಶ್ರೇಷ್ಠತೆ ಹೇಳದೇ ಯುವಕರು ಅನುಸರಿಸುವಂತಾಗಬೇಕು’ ಎಂದು ಸಲಹೆ ನೀಡಿದರು.

’ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಅಂತರರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟರು. ಎನ್‌ಸಿಇಆರ್‌ಟಿಯೂ ದೇಶದ ಉತ್ತಮ ನಾಗರಿಕನನ್ನು ರೂಪಿಸಲು ಯೋಗ ಒಲಿಂಪಿಯಾಡ್‌ ಅನ್ನು ಆಯೋಜಿಸುತ್ತಿದೆ’ ಎಂದು ತಿಳಿಸಿದರು.

ಆರ್‌ಐಇನ ಪ್ರಾಯೋಗಿಕ ಶಾಲೆಯ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಒಲಿಂಪಿಯಾಡ್‌ನಲ್ಲಿ 18 ರಾಜ್ಯ ಹಾಗೂ 5 ಕೇಂದ್ರಾಡಳಿತ ಪ್ರದೇಶದ 480 ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದು, 20ರಂದು ಸಮಾರೋಪ ನಡೆಯಲಿದೆ.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್, ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಆರ್‌ಐಇ ಪ್ರಾಂಶುಪಾಲ ಪ್ರೊ.ವಿ.ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.