ADVERTISEMENT

ಮೈಸೂರು: ಯೋಗ ದಿನಾಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:09 IST
Last Updated 14 ಜೂನ್ 2024, 15:09 IST
ಮೈಸೂರಿನಲ್ಲಿ ಹಮ್ಮಿಕೊಂಡಿರುವ ಯೋಗ ದಿನದ ಪ್ರಚಾರ ಸಾಮಗ್ರಿಯನ್ನು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಶುಕ್ರವಾರ ಬಿಡುಗಡೆ ಮಾಡಿದರು
ಮೈಸೂರಿನಲ್ಲಿ ಹಮ್ಮಿಕೊಂಡಿರುವ ಯೋಗ ದಿನದ ಪ್ರಚಾರ ಸಾಮಗ್ರಿಯನ್ನು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಶುಕ್ರವಾರ ಬಿಡುಗಡೆ ಮಾಡಿದರು   

ಮೈಸೂರು: ‘ವಿಶ್ವ ಯೋಗ ದಿನವನ್ನು ಜೂನ್ 21ರಂದು ನಗರದ ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾನು ಪ್ರತಿ ವರ್ಷ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತೇನೆ. ಸರ್ಕಾರದಿಂದ ನೀಡಿರುವ ₹1 ಲಕ್ಷ ಅನುದಾನದ ಜೊತೆಗೆ ದಾನಿಗಳಿಂದ ಹಣ ಪಡೆದು ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ಯೋಗದಿಂದಾಗಿ ಮೈಸೂರು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟದಲ್ಲಿ ಯೋಗ ದಿನಾಚರಣೆ ಆಯೋಜನೆಗೆ ₹1 ಲಕ್ಷ ಅನುದಾನ ಬರುತ್ತದೆ. ಕಾರ್ಯಕ್ರಮವನ್ನು ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವುದು. ಅಂದು ಬೆಳಿಗ್ಗೆ 7ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, 10 ಸಾವಿರ ಯೋಗಪಟುಗಳು ಭಾಗವಹಿಸುವರು. ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್‌ ಷರೀಫ್‌, ಯೋಗ ಒಕ್ಕೂಟದ ಪದಾಧಿಕಾರಿಗಳು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.