ADVERTISEMENT

ಎಚ್‌ಡಿ ಕೋಟೆ ಬಳಿ ಗಾಂಜಾ ಮತ್ತಿನಲ್ಲಿ ಯುವತಿಯರ ವಿಡಿಯೊ: ಮೈಸೂರು SP ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2023, 6:58 IST
Last Updated 11 ಆಗಸ್ಟ್ 2023, 6:58 IST
   

ಬೆಂಗಳೂರು: ಕೇರಳದ ಯುವತಿಯರು ಮೈಸೂರಿನ ಎಚ್‌.ಡಿ.ಕೋಟೆ ಬಳಿ ಗಾಂಜಾ ಸೇವಿಸಿ, ಮತ್ತಿನಲ್ಲಿ ತೇಲಾಡುತ್ತಿದ್ದ ವಿಡಿಯೊ ಹಾಗೂ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

ಕೆಲ ಯುವತಿಯರು ಕಾಡಿನಂಚಿನ ಗ್ರಾಮಗಳ ಹೊರವಲಯದಲ್ಲಿ ಬೀಡುಬಿಟ್ಟು ಮತ್ತಿನಲ್ಲಿ ತೇಲಾಡುವ, ಗ್ರಾಮಸ್ಥರು ಸ್ಥಳಕ್ಕೆ ಬಂದು ಹೀಗೆ ಮಾಡದಂತೆ ಹಾಗೂ ಸ್ಥಳವನ್ನು ತೆರವುಗೊಳಿಸುವಂತೆ ಸೂಚಿಸಿದರೂ, ಮತ್ತಿನಲ್ಲೇ ಇರುವ ದೃಶ್ಯ ವಿಡಿಯೊದಲ್ಲಿದೆ. 

ಕೇರಳದ ಹದಿಹರೆಯದ ಯುವಜನತೆ ಮಾದಕ ವಸ್ತುಗಳ ಸೇವನೆಗಾಗಿ ಗಡಿ ಭಾಗದ ಪ್ರದೇಶಗಳಿಗೆ ಬರುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ವಾತಾವರಣ ಹದಗೆಡುತ್ತಿದೆ. ಜತೆಗೆ ಇವರಿಂದ ತೀವ್ರ ತೊಂದರೆಯೂ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ADVERTISEMENT

ಈ ಪ್ರಕರಣ ನಡೆದಿರುವುದು ಕರ್ನಾಟಕದ ಗಡಿ ಭಾಗದಿಂದ ಕೆಲವೇ ದೂರದಲ್ಲಿರುವ ಪೆರಿಕಲ್ಲೂರಿನಲ್ಲಿ. 2023ರ ಫೆ. 5ರಂದು ಈ ಕುರಿತು ಪ್ರಕರಣ ದಾಖಲಾಗಿದೆ. ಅದೇ ದಿನ 30 ವರ್ಷದ ಜೈಮನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಆದರೆ ಈಗ ಈ ವಿಡಿಯೊ ಮತ್ತು ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಮೈಸೂರು ಜಿಲ್ಲೆಯಲ್ಲಿ ನಡೆದಿದ್ದು ಹಾಗೂ ಮೈಸೂರಿನ ಯುವತಿಯರು ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಎಕ್ಸ್‌'ನಲ್ಲಿ (ಟ್ವಿಟರ್‌) ಹಾಗೂ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘ಕರ್ನಾಟಕ ಕೇರಳ ಗಡಿಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಯುವತಿಯರು ಎಂಬ ವಿಡಿಯೊಗೆ ಸಂಬಂಧಿಸಿದಂತೆ. ದಿನಾಂಕ 05.02.2023 ರಲ್ಲಿ ಕೇರಳದ ವೈನಾಡು ಜಿಲ್ಲೆಯ ಪುಲಪಳ್ಳಿ PS ನಲ್ಲಿ Cr No 79/2023 ರಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದು ಫೆಬ್ರವರಿ 2023 ರಲ್ಲಿ ನಡೆದ ವಿಡಿಯೊ ಆಗಿರುತ್ತದೆ @KarnatakaCops @DgpKarnataka @Rangepol_SR‘
ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು

ಜತೆಗೆ ಕೇರಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ ಪ್ರತಿಯನ್ನೂ ಹಾಗೂ ಮತ್ತಿನಲ್ಲಿರುವ ಯುವತಿಯರ ಚಹರೆಗಳನ್ನು ಮರೆಮಾಚಿದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.