ಮೈಸೂರು: ಯುವದಸರೆಯನ್ನು ‘ವಿಐಪಿ ಹಾಗೂ ವಿವಿಐಪಿ’ಗಳಿಂದ ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಂತಹ ಕ್ರಾಂತಿಕಾರಕ ಹೆಜ್ಜೆಗೆ ಈ ಬಾರಿ ಯುವದಸರೆ ಕಾರಣವಾಗಿದೆ.
‘ವಿಐಪಿ’ ಪಾಸ್‌ಗಳನ್ನು ರದ್ದುಪಡಿಸಿ, ಮೊದಲು ಬಂದವರಿಗೆ ಆದ್ಯತೆ ಎಂಬ ನೀತಿಯನ್ನು ಜಾರಿಗೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ.
ಇದರಿಂದ ಗಣ್ಯ ಮತ್ತು ಅತಿಗಣ್ಯ ಎಂದು ಹಣೆಪಟ್ಟಿ ಹೊತ್ತವರಿಗೆ ಕಿರಿಕಿರಿಯಾಗಿದೆ. ಆದರೆ, ಅಪ್ಪಟ ಅಭಿಮಾನಿಯೊಬ್ಬ ಯಾರ ಹಂಗಿಲ್ಲದೇ ಮುಂದಿನ ಸಾಲಿನಲ್ಲಿ ಕುಳಿತು ನೋಡುವಂತಹ ಅವಕಾಶ ಸಿಕ್ಕಿದ್ದರಿಂದ ಯುವಪಡೆ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿ ನೂತನ ಹೆಜ್ಜೆ ನಿಜಕ್ಕೂ ಕ್ರಾಂತಿಕಾರಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಇದೇ ರೀತಿ ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತಿಗೂ ಪಾಸ್ ವ್ಯವಸ್ಥೆಯನ್ನು ರದ್ದುಪಡಿಸಿದರೆ ದಸರೆಯನ್ನು ನಿಜಕ್ಕೂ ಜನಸಾಮಾನ್ಯರ ಬಳಿಗೆ ಕೊಂಡೊಯ್ಯಬಹುದು ಎಂಬ ಅಭಿಪ್ರಾಯವನ್ನು ಬಹಳಷ್ಟು ಮಂದಿ ವ್ಯಕ್ತಪಡಿಸಿದ್ದಾರೆ.
ಹಿಂದೆಯೆಲ್ಲ ಅಪ್ಪಟ ಅಭಿಮಾನಿಗಳು ಎಷ್ಟೇ ಬೇಗ ಬಂದರೂ ಪಾಸ್ ಇಲ್ಲ ಎಂಬ ಕಾರಣಕ್ಕೆ ಹಿಂದಿನ ಸಾಲಿನಲ್ಲಿ ಕುಳಿತು ಕೊಳ್ಳಬೇಕಿತ್ತು. ಎಲ್‌ಇಡಿ ಪರದೆ ಮೇಲೆ ವೀಕ್ಷಿಸಬೇಕಿತ್ತು. ಆದರೆ, ಈ ಬಾರಿ ಒಂದೆರಡು ಗಂಟೆ ಬೇಗ ಬಂದರೆ ಸಾಕು ಆರಾಮವಾಗಿ ಕುಳಿತು ವೀಕ್ಷಿಸುವ ಅವಕಾಶ ಸಿಕ್ಕಿತು ಎಂದು ಯುವಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯ ಯುವದಸರೆಗೆ ಇರುವಂತೆಯೇ ಈ ಬಾರಿಯ ಯುವದಸರೆಗೂ ಆರೋಪಗಳು ಕೇಳಿ ಬಂದಿವೆ. ಮನರಂಜನೆಯ ನೆಪದಲ್ಲಿ ಹೊಸ ಸಿನಿಮಾಗಳ ‘ಪ್ರೊಮೊಷನ್’ಗೆ ಇದು ವೇದಿಕೆಯಾಯಿತು ಎಂಬ ಟೀಕೆಯೂ ಈ ಬಾರಿ ಅಂಟಿದೆ.
ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಯುವದಸರಾ ಸಮಿತಿ ಕಾರ್ಯಾಧ್ಯಕ್ಷ ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್, ‘ಸಂಭಾವಣೆ ಇಲ್ಲದೇ ಬಂದ ನಟರಿಗೆ ಒಂದೈದು ನಿಮಿಷ ಮಾತ್ರ ವೇದಿಕೆ ನೀಡಿದ್ದೇವೆ. ಅವರು ಸಿನಿಮಾ ಪ್ರೊಮೊಷನ್ ಕುರಿತು ಮಾತುಗಳನ್ನಾಡಿರಬಹುದು. ಆದರೆ, ಸಂಭಾವನೆ ಪಡೆದವರು ಯಾರೂ ಸಿನಿಮಾ ಪ್ರೊಮೊಷನ್ ಪಡೆದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.