ADVERTISEMENT

ಮೈಸೂರು | ಯುವ ದಸರೆಗೆ ‘ವರುಣಾತಂಕ’

ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:51 IST
Last Updated 6 ಅಕ್ಟೋಬರ್ 2024, 4:51 IST

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಹೊರವಲಯದ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನ ಸಮೀಪದ ಖಾಲಿ ಜಾಗದಲ್ಲಿ ಫೆ.6ರಿಂದ 10ರವರೆಗೆ ಆಯೋಜಿಸಲಾಗಿರುವ ‘ಯುವ ದಸರೆ’ಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ನಗರದಲ್ಲಿ ಎರಡು ದಿನಗಳಿಂದ ಸಂಜೆ ವೇಳೆ ಜೋರು ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೂ ಮೂರು ದಿನಗಳವರೆಗೆ ಮಳೆಯಾಗಲಿದೆ ಎಂಬ ವರದಿ ಇದೆ. ಇದು, ಯುವ ದಸರೆಯಲ್ಲಿ ಮನರಂಜನಾ ಕಾರ್ಯಕ್ರಮ ವೀಕ್ಷಿಸಲು ಬಯಸಿರುವವರಲ್ಲಿ ಆತಂಕ ಮೂಡಿಸಿದೆ.

ಹಿಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಅಲ್ಲಿ ಮಳೆಯಾದರೂ, ಜನರ ರಕ್ಷಣೆಗೆ ಪೆಂಡಾಲ್ ಹಾಕಲಾಗುತ್ತಿತ್ತು. ಆದರೆ, ಉತ್ತನಹಳ್ಳಿಯ ಜಾಗದಲ್ಲಿ ಬಯಲು ರಂಗಮಂದಿರದ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗುತ್ತಿದೆ. ಮಳೆಯಿಂದ ರಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಮಳೆಯಾದರೆ ನೆನೆಯಲೇಬೇಕಾಗುತ್ತದೆ.

ADVERTISEMENT

ಸಂಜೆ 6ರಿಂದ ಕಾರ್ಯಕ್ರಮ ನಿಗದಿಯಾಗಿದೆ. ಮೊದಲ ದಿನವಾದ ಭಾನುವಾರ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಮತ್ತು ತಂಡದಿಂದ ಸಂಗೀತ ಸಂಜೆ ನಡೆಯಲಿದೆ. ಸಾವಿರಾರು ಮಂದಿ ನೆರೆಯುವ ಸಾಧ್ಯತೆ ಇದ್ದು, ಮಳೆಯಿಂದ ರಕ್ಷಣೆಗೆ ಪರದಾಡಬೇಕಾದ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ₹8 ಸಾವಿರ, ₹5 ಸಾವಿರ, ₹2,500 ಹಾಗೂ ₹1,500ಕ್ಕೆ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಅವರಿಗೆ ವಿಶೇಷ ಹಾಗೂ ಪ್ರತ್ಯೇಕವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆಯೇ ಹೊರತು ಮಳೆಯಿಂದ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿಲ್ಲ.

‘ಯುವ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಮುನ್ಸೂಚನೆ ಇರುವುದರಿಂದ, ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಕೊಡೆಗಳನ್ನು ತಂದರೆ ತಪಾಸಣೆ ನಡೆಸಿ ಪ್ರವೇಶ ಕೊಡಲಾಗುವುದು’ ಎಂದು ಎಸ್ಪಿ ಎನ್.ವಿಷ್ಣುವರ್ಧನ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.