ಮೈಸೂರು: ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮದ ಸ್ಥಳವು ಮಹಾರಾಜ ಕಾಲೇಜು ಮೈದಾನದಿಂದ ಉತ್ತನಹಳ್ಳಿ ಮೈದಾನಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ನಗರದ ಹೊರವಲಯದಲ್ಲಿ ಕಾರ್ಯಕ್ರಮ ಆಯೋಜಿಸುವ ಜಿಲ್ಲಾಡಳಿತದ ನಿರ್ಧಾರಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ವ್ಯಕ್ತವಾಗಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿ ವರ್ಷ ಯುವ ದಸರಾ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದವು. ಸಾವಿರಾರು ಸಂಖ್ಯೆಯಲ್ಲಿ ಯುವಜನರು ಸೇರಿ ಸಂಭ್ರಮಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಈ ಬಾರಿ ಕಾರ್ಯಕ್ರಮಗಳನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದರು. ಹಲವು ಸ್ಥಳಗಳ ಪರಿಶೀಲನೆ ಬಳಿಕ ಲಲಿತಾದ್ರಿಪುರ–ಉತ್ತನಹಳ್ಳಿ ನಡುವಿನ ಖಾಲಿ ಜಮೀನನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಸುಮಾರು ನೂರು ಎಕರೆಯಷ್ಟು ಕೃಷಿ ಭೂಮಿಯನ್ನು ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಹಿಂದಿನ ಬಾರಿಗಿಂತ ಬೃಹತ್ ಆದ ವೇದಿಕೆ ನಿರ್ಮಾಣ ಆಗಲಿದ್ದು, ಸುಮಾರು 150 ಅಡಿ ವಿಸ್ತೀರ್ಣದ ಬೃಹತ್ ವೇದಿಕೆ ತಲೆ ಎತ್ತಲಿದೆ. 1 ಲಕ್ಷ ಮಂದಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ವಿಐಪಿಗಳು, ಜನಸಾಮಾನ್ಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರಲಿದೆ. ಕುಡಿಯುವ ನೀರು, ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ನಗರ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವೂ ಇರಲಿದೆ. ಪಾರ್ಕಿಂಗ್ ವ್ಯವಸ್ಥೆ, ಅಲ್ಲಲ್ಲಿ ಸೈನ್‌ಬೋರ್ಡ್‌ಗಳ ವ್ಯವಸ್ಥೆಯನ್ನೂ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಖ್ಯಾತನಾಮರಿಂದ ಕಾರ್ಯಕ್ರಮ: ಸಿನಿಮಾ ಹಾಗೂ ಸಂಗೀತ ಲೋಕದ ದಿಗ್ಗಜರು ಈ ಬಾರಿಯ ಯುವ ದಸರಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್. ರೆಹಮಾನ್, ಗಾಯಕಿ ಶ್ರೇಯಾ ಘೋಷಲ್, ‘ಕೆಜಿಎಫ್’ ಖ್ಯಾತಿಯ ರವಿ ಬಸರೂರ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ಪ್ರಸ್ತುತಪಡಿಸುವ ನಿರೀಕ್ಷೆ ಇದೆ. ಕಲಾವಿದರ ಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
100 ಎಕರೆಯಷ್ಟು ಕೃಷಿ ಜಮೀನಿನಲ್ಲಿ ಕಾರ್ಯಕ್ರಮ 1 ಲಕ್ಷ ಆಸನಗಳ ವ್ಯವಸ್ಥೆ ಮೊಬೈಲ್ ಶೌಚಾಲಯ, ನೀರು, ಪಾರ್ಕಿಂಗ್ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.