ಮೈಸೂರು: ದಸರಾ ಅಂಗವಾಗಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಸಂಜೆ ವರ್ಣರಂಜಿತ ಚಾಲನೆ ಪಡೆದ ‘ಯುವ ದಸರಾ’ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮವನ್ನು ಸಂಭ್ರಮದ ಹೊನಲಲ್ಲಿ ತೇಲುವಂತೆ ಮಾಡಿತು. ಚಲನಚಿತ್ರ ಕಲಾವಿದರು ಯುವಜನರಿಗೆ ಹಲವು ಸಲಹೆಗಳನ್ನು ನೀಡಿ, ಎಂಜಾಯ್ ಮಾಡುವುದರೊಂದಿಗೆ ಜವಾಬ್ದಾರಿಯನ್ನು ಮರೆಯಬಾರದು ಎಂಬ ಕಿವಿಮಾತನ್ನೂ ಹೇಳಿದರು.
ಪ್ರಮುಖ ಆಕರ್ಷಣೆಯಾಗಿದ್ದ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್, ತಮ್ಮ ‘ಘೋಸ್ಟ್’ ಚಲನಚಿತ್ರದ ಡೈಲಾಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ‘ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯಾ ನೋಡಿದೆ’ ಹಾಗೂ ‘ಮುತ್ತಣ್ಣ ಪೀಪಿ ಊದುವಾ, ಮುತ್ತಣ್ಣ ಡೋಲು ಬಡಿಯುವ’ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ಕುಣಿಸಿದರು. ತಾವೂ ಸ್ಟೆಪ್ ಹಾಕಿದರು.
‘ಜೀವನವನ್ನು ಎಂಜಾಯ್ ಮಾಡಬೇಕು. ಓದುವ ಸಮಯದಲ್ಲಿ ಓದಬೇಕು. ಜಾಲಿಯಾಗಿರಬೇಕಾದ ವೇಳೆ ಜಾಲಿ ಮಾಡಬೇಕು. ಶಿಸ್ತಿನಿಂದ ಇದ್ದರೆ ಜೀವನ ಚೆನ್ನಾಗಿರುತ್ತದೆ. ಅಪ್ಪ- ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರಾಮಾಣಿಕತೆ ಬಿಡಬಾರದು. ಈಗಿನ ಯುವಕರು ಬುದ್ಧಿವಂತರು; ಹಾದಿ ತಪ್ಪಬಾರದು’ ಎಂದು ಸಲಹೆಯನ್ನೂ ನೀಡಿದರು.
ಮೀಟ್ ಮಾಡಣ, ಇಲ್ಲ ಡೇಟ್ ಮಾಡಣ:
ಗಾಯಕಿ ಐಶ್ವರ್ಯಾ ರಂಗರಾಜನ್ ‘ಏಕ್‌ಲವ್ಯಾ’ ಚಲನಚಿತ್ರಕ್ಕಾಗಿ ತಾವೇ ಹಾಡಿರುವ ‘ಮೀಟ್ ಮಾಡಣ ಇಲ್ಲ ಡೇಟ್ ಮಾಡಣ’ ಹಾಡಿ ರಂಜಿಸಿದರು. ‘ಜೋಕೆ... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು’ ಎಂದು ದಿವ್ಯಾ ರಾಮಚಂದ್ರನ್ ಹಾಡಿದರೆ, ಮೈಸೂರಿನವರೇ ಆದ ವ್ಯಾಸರಾಜ್ ಸೋಸಲೆ ‘ಚಕ್ರವರ್ತಿ’ ಸಿನಿಮಾದ ‘ನೋಡೋ ಕತ್ತು ಎತ್ತಿ’ ಎನ್ನುವ ಮೂಲಕ ದರ್ಶನ್ ತೂಗುದೀಪ ಅಭಿಮಾನಿಗಳ ಮನಗೆದ್ದರು. ‘ಜಲ್ಕಾ ಜಲ್ಕಾ ರೇ’ ಹಾಡಿಗೆ ನರ್ತಿಸಿದ ಚಿತ್ರ ನಟಿ ರಾಧಿಕಾ ನಾರಾಯಣ್ ಹಾಗೂ ತಂಡದವರಿಗೂ ಜನಸ್ತೋಮ ಮೆಚ್ಚುಗೆ ವ್ಯಕ್ತಪಡಿಸಿತು.
ಕಿಶನ್ ಬಿಳುಗಲಿ ತಮ್ಮ ತಂಡದೊಂದಿಗೆ ಮೈನವಿರೇಳಿಸುವ ಏರಿಯಲ್ ಡ್ಯಾನ್ಸ್ ಪ್ರಸ್ತುತಪಡಿಸಿದರು. ಪುನೀತ್ ರಾಜಕುಮಾರ್ ಹಾಡಿಗೆ ಆ ತಂಡ ನರ್ತಿಸುವಾಗ ನೆರೆದಿದ್ದವರಲ್ಲಿ ಅಭಿಮಾನ ಉಕ್ಕಿತು.
‘ಕೇಳದೆ ನಿಮಗೀಗ ದೂರದಲ್ಲಿ ಯಾರೋ’, ‘ಕೈನಾಗೆ ಮೈಕ್ ಕೊಟ್ರೆ ನಾನ್ ಸ್ಟಾಪು ಭಾಷಣ’ ಹಾಗೂ ‘ಯೇ ಹುಡ್ಗಿ ಯಾಕಿಂಗಾಡ್ತಿ ಮಾತಲ್ಲೇ ಮಳ್ಳ ಮಾಡ್ತಿ’ ಹಾಡಿದ ಚಿತ್ರನಟ ಶರಣ್ ನೆರೆದಿದ್ದವರನ್ನು ರಂಜಿಸಿದರು.
ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕು:
‘ತಂದೆ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ದಸರಾ ತೋರಿಸುತ್ತಿದ್ದರು. ಚಿಕ್ಕವನಾಗಿದ್ದಾಗಿನಿಂದಲೂ ಈ ಉತ್ಸವ ನೋಡುತ್ತಿದ್ದೇನೆ. ನಟನಾದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸುತ್ತಲೇ ಬಂದಿದ್ದೇನೆ. ಪ್ರತಿ ದಸರಾದಲ್ಲೂ ಹೊಸ ಅನುಭವವಾಗುತ್ತಿದೆ. ಈ ವೇಳೆಯಲ್ಲಿ ಬಿಡುಗಡೆಯಾದ ಎಲ್ಲ ಸಿನಿಮಾಗಳೂ ದೊಡ್ಡ ಹಿಟ್ ಆಗಿವೆ’ ಎಂದು ಖುಷಿ ವ್ಯಕ್ತಪಡಿಸಿದರು.
‘ನನ್ನ ‘ಛೂಮಂಥರ್’ ನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ’ ಎಂದು ಪ್ರಕಟಿಸಿದರು.
ನಟ ಅಜಯ್ ರಾವ್ ಭಾಗವಹಿಸಿದ್ದರು. ‘ನಾನು ಯುದ್ಧಕಾಂಡ’ ಸಿನಿಮಾ ನಿರ್ಮಾಣ ಮಾಡಿದ್ದು, ಮುಂದಿನ ವರ್ಷದ ಜನವರಿ ಅಥವಾ ಫೆಬ್ರುವರಿಯಲ್ಲಿ ತೆರೆಗೆ ಬರಲಿದೆ. ಅದರಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ತಿಳಿಸಿದರು.
ನಟಿ ಧನ್ಯಾ ರಾಮಕುಮಾರ್ ಹಾಗೂ ನಟ ರಿಷಿ ಭಾಗವಹಿಸಿದ್ದರು. ಸಾಧುಕೋಕಿಲ ಹಾಗೂ ತಂಡದವರು ತಮ್ಮ ಕಾರ್ಯಕ್ರಮಗಳ ಮೂಲಕ ರಂಜನೆ ನೀಡಿದರು.
ಇದಕ್ಕೂ ಮುನ್ನ, ನಾಡಗೀತೆ ಮತ್ತು ಸಂವಿಧಾನ ಪೀಠಿಕೆಯ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಿದರು.
ಶಾಸಕರಾದ ಕೆ. ಹರೀಶ್ ಗೌಡ, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ಜಿ.ರೂಪಾ ಯೋಗೇಶ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಸೀಮಾ ಲಾಟ್ಕರ್, ಉಪ ಸಮಿತಿ ಅಧ್ಯಕ್ಷ ಚೆಲುವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.