ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಮೃಗಾಲಯದ ಚಟುವಟಿಕೆಗಳಿಗೆ ಖಂಡ್ರೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:22 IST
Last Updated 15 ಜೂನ್ 2024, 16:22 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಮೈಸೂರು: ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ‘ಮೃಗಾಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇವೆ’ ಎಂದು ಒತ್ತಿ ಹೇಳಿದರು.

ಮೃಗಾಲಯದ ಭೇಟಿಗಾಗಿ ವಾಟ್ಸ್‌ಆ್ಯಪ್‌ ಮೂಲಕ ಟಿಕೆಟ್‌ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಮೊ.ಸಂ 96866 68818ಗೆ ವಾಟ್ಸ್‌ಆ್ಯಪ್‌ ಮೂಲಕ ‘ಹಾಯ್‌’ ಎಂಬ ಸಂದೇಶ ಕಳಿಸುವ ಮೂಲಕ ಟಿಕೆಟ್‌ ಪಡೆಯಬಹುದಾಗಿದೆ. ಕೆಎಸ್‌ಡಿಎಲ್‌(ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಬೆಂಗಳೂರು) ಸಂಸ್ಥೆಯು ಸಿಎಸ್‌ಆರ್‌ ಯೋಜನೆಯಡಿ ಮೃಗಾಲಯ ಹಾಗೂ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದ ದೈನಂದಿನ ಸಂರಕ್ಷಣಾ ಕೆಲಸ ಕಾರ್ಯಗಳಿಗಾಗಿ ನೀಡಿದ ಬೊಲೆರೋ ವಾಹನಕ್ಕೆ ಪೂಜೆ ಸಲ್ಲಿಸಿದರು.

ಮೃಗಾಲಯದ ಪ್ರಾಣಿ, ಪಕ್ಷಿಗಳ ಚಿಕಿತ್ಸೆಗಾಗಿ ನೂತನ ಮಾದರಿಯ ಉಪಕರಣ ಹಾಗೂ ಔಷಧಿ ಒಯ್ಯುವ ₹11.73 ಲಕ್ಷ ಮೌಲ್ಯದ ವನ್ಯಜೀವಿ ಆಂಬುಲೆನ್ಸ್‌ಗೆ ಚಾಲನೆ ನೀಡಿದರು. ನಂತರ ನಾಲ್ಕು ವರ್ಗದಡಿ ಪ್ರಾಣಿ ದತ್ತು ಸ್ವೀಕಾರ ಯೋಜನೆಯನ್ನು ಉದ್ಘಾಟಿಸಿದರು.

ADVERTISEMENT

2001ನೇ ಸಾಲಿನಲ್ಲಿ ಮೃಗಾಲಯದಲ್ಲಿ ಆರಂಭವಾದ ಪ್ರಾಣಿ ದತ್ತು ಸ್ವೀಕಾರ ಯೋಜನೆ ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ನೆಚ್ಚಿನ ಪ್ರಾಣಿಯನ್ನು ಒಂದು ವರ್ಷಕ್ಕೆ ದತ್ತು ಪಡೆಯಬಹುದಿತ್ತು. ಆದರೆ ಈಗ ಅದನ್ನು ಒಂದು ದಿನ, ತಿಂಗಳು, ಆರು ತಿಂಗಳು ಹಾಗೂ ಆರು ವರ್ಷಕ್ಕೆ ವಿಂಗಡಿಸಲಾಗಿದೆ.

ಜಿರಾಫೆಗೆ ನಾಮಕರಣ: ಮೃಗಾಲಯದ ಭರತ್‌ ಮತ್ತು ಲಕ್ಷ್ಮಿ ಎಂಬ ಜಿರಾಫೆಗಳಿಗೆ ಜ.1ರಂದು ಗಂಡು ಜಿರಾಫೆ ಮರಿ ಜನಿಸಿದ್ದು, ಅದಕ್ಕೆ ಸಚಿವರು ‘ದಕ್ಷ’ ಎಂದು ನಾಮಕರಣ ಮಾಡಿದರು. ಅದರ ಪಾಲನೆ ಮಾಡುವವರು ಅದನ್ನು ‘ಸೂರ್ಯ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ನಂತರ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಮೃಗಾಲಯ ಪ್ರಾಧಿಕಾರದ ಆಡಳಿತ ಕಚೇರಿ ಆವರಣದಲ್ಲಿರುವ ನೂತನ ಅಧ್ಯಕ್ಷರ ಕಚೇರಿ ಉದ್ಘಾಟಿಸಿದರು. ಬಳಿಕ ಅಲ್ಲಿನ ಪಶುವೈದ್ಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.