ಮೈಸೂರು: ‘ಜೀವವೈವಿಧ್ಯದ ನಷ್ಟವು ಹಿಂದೆಂದೂ ಕಂಡಿಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ’ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಶುಕ್ಲಾ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಚಾಮರಾಜೇಂದ್ರ ಮೃಗಾಲಯವು ಕೇಂದ್ರ ಮೃಗಾಲಯ ಪ್ರಾಧಿಕಾರ(ಸಿಝಡ್‌ಎ)ದ ಸಹಯೋಗದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮೃಗಾಲಯಗಳ ನಿರ್ದೇಶಕರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜೀವಂತ ಗ್ರಹದ ಸೂಚ್ಯಂಕ’ (ಲಿವಿಂಗ್ ಪ್ಲಾನೆಟ್ ಇಂಡೆಕ್ಸ್) ವರದಿಯನ್ನು ಗಮನಿಸಿದರೆ ಜೀವವೈವಿಧ್ಯದಲ್ಲಿ ಬಹಳ ವ್ಯತ್ಯಾಸ ಆಗಿರುವುದನ್ನು ಕಾಣಬಹುದಾಗಿದೆ. ಪರಿಸರ ವಿನಾಶದಿಂದಾಗಿ 1970ರಿಂದ ಈಚೆಗೆ ಜೀವಿವೈವಿಧ್ಯದಲ್ಲಿ ಶೇ 68ರಷ್ಟು ಇಳಿಕೆ ಕಂಡುಬಂದಿರುವುದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ತಡೆಯುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಹೇಳಿದರು.
‘ಆರಂಭದಲ್ಲಿ ಮೃಗಾಲಯಗಳ ಉದ್ದೇಶವು ಪ್ರಾಣಿ–ಪಕ್ಷಿಗಳನ್ನು ಬೋನುಗಳಲ್ಲಿಟ್ಟು ಪ್ರದರ್ಶಿಸುವುದು ಮಾತ್ರವೇ ಆಗಿತ್ತು. ಆದರೆ, ಈಗ ಪ್ರಾಣಿಗಳ ಸಂರಕ್ಷಣೆ, ಸಂಶೋಧನೆ, ಶಿಕ್ಷಣ ಹಾಗೂ ಮನರಂಜನೆಯ ಮೂಲಕ ಕಲಿಸುವ ಕಾರ್ಯ ನಡೆಯುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಮೃಗಾಲಯಗಳಲ್ಲಿನ ಕೆಟ್ಟ ವಿಷಯಗಳನ್ನು ಕೇಳಿರಬಹುದು. ಆದರೆ, ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಕೆಲವು ವೇಳೆ, ರಕ್ಷಿಸಲ್ಪಟ್ಟ ಪ್ರಾಣಿಗಳ ಸ್ಥಿತಿಯು ತುಂಬಾ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ಅವುಗಳ ಪುನರ್ವಸತಿಗಾಗಿ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವ ಪರಿಕಲ್ಪನೆಯೂ ಅನುಷ್ಠಾನಗೊಂಡಿದೆ’ ಎಂದರು.
ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾತನಾಡಿ, ‘ಪ್ರಸ್ತುತ ವನ್ಯಜೀವಿಗಳ ಮೇಲೆ ಬಹಳಷ್ಟು ಒತ್ತಡ ಹಾಗೂ ಅಪಾಯವಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಮೃಗಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳನ್ನು ಸ್ಕ್ರೀನ್ (ಟಿವಿ, ಮೊಬೈಲ್ ಫೋನ್)ಗಳಿಂದ ದೂರವಾಗಿಸಲು ಮೃಗಾಯಲಯಗಳ ಮೂಲಕ ಅವರನ್ನು ಸೆಳೆಯುವ ಹಾಗೂ ವನ್ಯಪ್ರಾಣಿಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಯತ್ನವನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ಕರ್ನಾಟಕದಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ಮೃಗಾಲಯಗಳ ನಿರ್ವಹಣೆ–ಮೇಲ್ವಿಚಾರಣೆಗೆ ಪ್ರತ್ಯೇಕ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಆದಾಯವನ್ನು (ಸಂಪನ್ಮೂಲವನ್ನು) ಇತರ ಮೃಗಾಲಯಗಳಿಗೆ ಹಂಚಿ ನಿರ್ವಹಿಸಲಾಗುತ್ತಿದೆ’ ಎಂದರು.
‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮತ್ತೊಂದು ಮೃಗಾಲಯ ಸ್ಥಾಪನೆಗೆ ಯೋಜಿಸಲಾಗಿದೆ. ಸಿಎಸ್ಆರ್ ಅನುದಾನದಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು. ಬೆಳಗಾವಿ ಮೃಗಾಲಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದ್ದು, ಅಲ್ಲಿ ರಕ್ಷಣಾ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದೆ. ಮತ್ತಷ್ಟು ಝೂಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಸಂಪನ್ಮೂಲ ಒದಗಿಸಿದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೇಯರ್ ಶಿವಕುಮಾರ್ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಚಣ್ಣ ಹಾಗೂ ಗೋಕುಲ್ ಗೋವರ್ಧನ್, ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ ಕುಲಕರ್ಣಿ ಪಾಲ್ಗೊಂಡಿದ್ದರು.
‘ಹಾವುಗಳ ಕಡಿತದಿಂದ ಸಾವು: ಗಂಭೀರ’
ಐಎಫ್‌ಎಸ್ ಅಧಿಕಾರಿ, ಚೆನ್ನೈ ಹಾವು ಉದ್ಯಾನದ ಬಾಲರಾಜ್ ಮಾತನಾಡಿ, ‘ಮಾನವ–ಪ್ರಾಣಿ ಸಂಘರ್ಷವೆಂದಾಕ್ಷಣ ನಾವು ಆನೆ, ಹುಲಿ, ಸಿಂಹ, ಚಿರತೆ ದಾಳಿಯಿಂದ ಆಗುತ್ತಿರುವ ಸಾವಿನ ಬಗ್ಗೆ ಚರ್ಚಿಸುತ್ತೇವೆ. ಆದರೆ, ಹಾವುಗಳ ಕಡಿತದಿಂದ ವರ್ಷಕ್ಕೆ 50ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಉದ್ಯಾನದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಏನಿದು ಸಮ್ಮೇಳನ?
ಎರಡು ದಿನಗಳ ಈ ಸಮ್ಮೇಳನದಲ್ಲಿ 25 ರಾಜ್ಯಗಳಿಂದ 60 ಅಧಿಕಾರಿಗಳು ಪಾಲ್ಗೊಂಡಿದ್ದಾರೆ. 15 ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಲಿದೆ. ಮೃಗಾಲಯಗಳ ಮಾಸ್ಟರ್ ಪ್ಲಾನ್, ರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಸಂತಾನಾಭಿವೃದ್ಧಿ, ಮೃಗಾಲಯಗಳನ್ನು ವೈವಿಧ್ಯಮಯವಾಗಿ ಅಭಿವೃದ್ಧಿಪಡಿಸುವುದು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಉತ್ತಮ ಅಭ್ಯಾಸಗಳನ್ನು ನಿರ್ದೇಶಕರು ಹಂಚಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.