ಬೆಂಗಳೂರು: 'ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ರಚಿಸಿರುವ ಉಸ್ತುವಾರಿ ಸಮಿತಿಯು ಸಾಂವಿಧಾನಿಕ ಸಂಸ್ಥೆಯಲ್ಲ. ಎನ್‍ಜಿಟಿ ಆದೇಶಗಳನ್ನು ಅತಿಕ್ರಮಿಸುವ ಅಧಿಕಾರವನ್ನು ಸಮಿತಿ ಹೊಂದಿರುವುದಿಲ್ಲ' ಎಂದುಎನ್‍ಜಿಟಿಉಸ್ತುವಾರಿ ಸಮಿತಿಯ ಸದಸ್ಯ ಯು.ವಿ.ಸಿಂಗ್ ತಿಳಿಸಿದರು.
'ಬೆಳ್ಳಂದೂರು ಕೆರೆಯ ಪುನರುಜ್ಜೀವನ ಪ್ರಕ್ರಿಯೆಯ ಒಳನೋಟ ಮತ್ತು ಅದರಿಂದ ಪಾಠ' ಕುರಿತು ’ನಮ್ಮ ಬೆಂಗಳೂರು ಪ್ರತಿಷ್ಠಾನ‘ ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದರು.
ಎನ್‍ಜಿಟಿ ಉಸ್ತುವಾರಿ ಸಮಿತಿ ಸದಸ್ಯ ಪ್ರೊ.ಟಿ.ವಿ.ರಾಮಚಂದ್ರ,' ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‍ಟಿಪಿ) ಅಳವಡಿಕೆ ವಿಚಾರದಲ್ಲಿ ಜಕ್ಕೂರು ಕೆರೆ ಮಾದರಿಯನ್ನೇ ಬೆಳ್ಳಂದೂರು ಕೆರೆಗೆ ಪಾಲಿಸುವುದು ಸೂಕ್ತ. ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸುವುದರಿಂದ ಭೂಮಿಯ ತೇವಾಂಶ ಕಾಯ್ದುಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆ' ಎಂದರು.
'ಕೆರೆ ಅಭಿವೃದ್ಧಿಯ ವಿಚಾರದಲ್ಲಿ ಸಾರ್ವಜನಿಕರನ್ನು ಸಮಿತಿ ಸ್ವಾಗತಿಸುತ್ತಿದ್ದು, ಕೆರೆ ವೀಕ್ಷಣೆ ಹಾಗೂ ಸಲಹೆ ಸೂಚನೆಗಳನ್ನು ನೀಡಲು ಅವಕಾಶವಿದೆ. ನಗರದಲ್ಲಿ ಮಳೆ ತಗ್ಗಿದ ನಂತರ ಕೆರೆಯ ಪುನರುಜ್ಜೀವನ ಕೆಲಸಗಳು ಕಾರ್ಯಾರಂಭಗೊಳ್ಳಲಿವೆ. ಇದರಿಂದ ಶೀಘ್ರವೇ ಸ್ವಚ್ಛ ಬೆಳ್ಳಂದೂರು ಕೆರೆಯನ್ನು ಕಾಣಬಹುದು' ಎಂದರು.
ಸೆಂಟರ್ ಫಾರ್ ಸೋಷಿಯಲ್ ಆ್ಯಂಡ್ ಎನ್ವಿರಾನ್‍ಮೆಂಟಲ್ ಇನ್ನೊವೇಷನ್ ಸಂಸ್ಥೆಯ ನಿರ್ದೇಶಕಿ ವೀಣಾ ಶ್ರೀನಿವಾಸನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.