ADVERTISEMENT

ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಶೈಕ್ಷಣಿಕ ಪ್ರಗತಿಗೆ ರಸಪ್ರಶ್ನೆ ಸ್ಪರ್ಧೆ ಸಹಕಾರಿ

‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಬಿಡುಗಡೆಗೊಳಿಸಿದ ರವಿ ಡಿ. ಚನ್ನಣ್ಣನವರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 4:11 IST
Last Updated 15 ಅಕ್ಟೋಬರ್ 2020, 4:11 IST
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರು ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಅನ್ನು ಬಿಡುಗಡೆಗೊಳಿಸಿದರು 
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರು ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಅನ್ನು ಬಿಡುಗಡೆಗೊಳಿಸಿದರು    

ದೊಡ್ಡಬಳ್ಳಾಪುರ: ‘ನಾಡಿನ ಜನರ ಧ್ವನಿಯಾಗಿ ಏಳು ದಶಕಗಳಿಂದಲೂ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯದ ಸುದ್ದಿಗಳನ್ನು ನೀಡುವ ಮೂಲಕ ಇಂದಿಗೂ ಪ್ರಜಾವಾಣಿ ಓದುಗರ ವಿಶ್ವಾಸವನ್ನು ಉಳಿಸಿಕೊಂಡಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಹೇಳಿದರು.

‘ಪ್ರಜಾವಾಣಿ’ ವತಿಯಿಂದ ಓದುಗರು ಹಾಗೂ ವಿದ್ಯಾರ್ಥಿಗಳಿಗಾಗಿ ನ. 15ರಿಂದ ನಡೆಸಲಾಗುತ್ತಿರುವ ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಅನ್ನುಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜನರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ‘ಪ್ರಜಾವಾಣಿ’ ಇಂದಿಗೂ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಸಾಮಾನ್ಯ ಜ್ಞಾನದಿಂದ ಮೊದಲುಗೊಂಡು ಎಲ್ಲಾ ವಲಯದ ಸಮಗ್ರ ಮಾಹಿತಿಯನ್ನು ಓದುಗರಿಗೆ ನೀಡುತ್ತಿದೆ. ಸಂವಿಧಾನದ ಚೌಕಟ್ಟಿನಡಿ ಸಮಸಮಾಜವನ್ನು ಕಟ್ಟುವಲ್ಲಿ ಒಂದು ಮಾಧ್ಯಮವಾಗಿ ಮಾಡಬೇಕಿರುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ನನ್ನ ವಿದ್ಯಾರ್ಥಿ ದಿಸೆಯಿಂದ ಆರಂಭವಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗೆ ಹೋಗುವವರೆಗೂ ‘ಪ್ರಜಾವಾಣಿ’ ಪತ್ರಿಕೆಯ ಓದು ನನಗೆ ಸಹಕಾರಿಯಾಗಿದೆ. ವಿಶ್ವಾಸಾರ್ಹ ಸುದ್ದಿಗಳನ್ನು ಪ್ರಕಟಿಸುವ ಮೂಲಕ ನಾಗರಿಕರನ್ನು ಸದಾ ಜೀವಂತವಾಗಿಟ್ಟಿದೆ. ಹಲವು ಪ್ರಥಮಗಳನ್ನು ಓದುಗರಿಗೆ ನೀಡುತ್ತಿರುವ ‘ಪ್ರಜಾವಾಣಿ’ಯು ಈಗ ಪತ್ರಿಕೆಯ ಓದುಗರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ದೊಡ್ಡ ಮೊತ್ತದ ಬಹುಮಾನ ನೀಡುತ್ತಿರುವುದು ಅಭಿನಂದನೀಯ’ ಎಂದರು.

ಹೆಮ್ಮೆಯ ಪತ್ರಿಕೆ:‘ಪ್ರಜಾವಾಣಿ’ಯು ಹೆಮ್ಮೆಯ ಪತ್ರಿಕೆ ಎಂದು ಹೇಳಲು ಸಂತಸವಾಗುತ್ತದೆ. ಪತ್ರಿಕೆಯಲ್ಲಿನ ಸುದ್ದಿಗಳು ಖಚಿತವಾಗಿರುತ್ತವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ ಹೇಳಿದರು.

ನ್ಯೂಸ್‌ ಕ್ವಿಜ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೋವಿಡ್–19‌ ಸಂದರ್ಭದಲ್ಲಿ ಓದುಗರನ್ನು ಕ್ರಿಯಾಶೀಲರನ್ನಾಗಿಸಲು ರಸಪ್ರಶ್ನೆ ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಈಗ ದಸರಾ ರಜೆಯೂ ಇದೆ. ಇದರಿಂದ ಪ್ರತಿದಿನ ಪತ್ರಿಕೆ ಓದಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಬಹುಮಾನ ಗೆಲ್ಲುವ ಅವಕಾಶ ಇದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸದಾ ಚಟುವಟಿಕೆಯಿಂದ ಇರಲು ರಸಪ್ರಶ್ನೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಪತ್ರಿಕೆ ಓದುವ ಹವ್ಯಾಸ ಬೆಳೆಸಿ: ನಾನು ಚಿಕ್ಕವಯಸ್ಸಿನಿಂದಲೇ ಪತ್ರಿಕೆ ಓದಲು ಆರಂಭಿಸಿದ್ದೇ ‘ಪ್ರಜಾವಾಣಿ’ಯ ಮೂಲಕವೇ ಎಂದು ಹೇಳಿದ ಡಿವೈಎಸ್‌ಪಿ ಟಿ. ರಂಗಪ್ಪ, ‘ಸ್ಥಳೀಯ ಸುದ್ದಿಗಳಿಂದ ಹಿಡಿದು ರಾಜ್ಯ, ದೇಶ, ವಿದೇಶಗಳ ಸಮಗ್ರವಾದ ಹಾಗೂ ಓದುಗರಿಗೆ ಅಗತ್ಯ ಇರುವ ಸುದ್ದಿಗಳನ್ನು ನೀಡುತ್ತ ಬಂದಿರುವ ‘ಪ್ರಜಾವಾಣಿ’ ಪತ್ರಿಕೆಯು ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ’ ಎಂದು ಹೇಳಿದರು.

ಪೋಷಕರು ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಪತ್ರಿಕೆ ಓದಿ ಬಹುಮಾನ ಗೆಲ್ಲುವ ಆಸೆಯಿಂದಲಾದರೂ ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.