ಲಿಂಗಸುಗೂರು: ‘ಕಳೆದ ಮೂರು ದಶಕಗಳ ನಿರಂತರ ಹೋರಾಟದಲ್ಲಿ ಎಲ್ಲಿಯವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ ಎಂಬ ಘೋಷಣೆ ಹಾಕುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಜನಪರ ಹೋರಾಟಗಳ ಗೆಲುವಿಗೆ ರಾಜಕೀಯ ಪ್ರವೇಶ ಅನಿವಾರ್ಯ’ ಎಂದು ಜನಾಂದೋಲ ಮಹಾಮೈತ್ರಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ಸೋಮವಾರ ಜಾಗೃತ ಮತದಾರರ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ವಿವಿಧ ಹಂತದ ಹೋರಾಟ, ಧರಣಿ ನಡೆಸಿದರೂ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದನೆ ದೊರೆಯದಾಗಿದೆ. ಮನವಿ ಪತ್ರಗಳ ಭಿಕ್ಷಾಟನೆಗಳಿಂದ ಜಯ ಅಸಾಧ್ಯ. ವಿಧಾನಸಭೆಯಲ್ಲಿ ಜನಪರ ಹೋರಾಟಗಳಿಗೆ ಧ್ವನಿಯಾಗಿ ಪ್ರತಿನಿಧಿಗಳ ಆಯ್ಕೆಗೆ 40ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಒಕ್ಕೂಟ ರಚಿಸಿಕೊಂಡಿದ್ದು ಜನತೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಜನ ವಿರೋಧಿಗಳೆ ಒಂದಾಗುತ್ತಿರುವ ಕಾಲಘಟ್ಟದಲ್ಲಿ ಜನಪರ ಹೋರಾಟಗಾರರು ಒಂದಾಗಿ ಸಮಾಜವಾದಿ ಸಿದ್ಧಾಂತದ ಉಳಿವಿಗೆ ಮುಂದಾಗಿದ್ದೇವೆ. ಲಿಂಗಸುಗೂರು ಮೀಸಲು ವಿಧಾನಸಭೆ ಚುನಾವಣೆಗೆ ಗುತ್ತಿಗೆದಾರಿಕೆ, ಅಕ್ರಮ ಗಣಿ ಮಾಲೀಕರ ಅಟ್ಟಹಾಸಕ್ಕೆ ಅಭಿವೃದ್ಧಿ ಕುಂಠಿತಗೊಂಡಿದೆ. ವಜ್ಜಲ, ಬಂಡಿ, ಹೂಲಗೇರಿ ವಿರುದ್ಧ ಬಂಡಾಯದ ಬಾವುಟ ಹಿಡಿದು ಮತದಾರರು ಜನಾಂದೋಲನಕ್ಕೆ ಬರಬೇಕು’ ಎಂದು ಕರೆ ನೀಡಿದರು.
ಸಿಪಿಐ(ಎಂಎಲ್) ರೆಡ್‌ಸ್ಟಾರ್ ಅಭ್ಯರ್ಥಿ ಆರ್. ಮಾನಸಯ್ಯ ಮಾತನಾಡಿ, ‘ಪರಿಶಿಷ್ಟಜಾತಿ ಮೀಸಲು ಕ್ಷೇತ್ರದ ಲಾಭ ಪಡೆದುಕೊಂಡಿರುವ ಮಾನಪ್ಪ ವಜ್ಜಲ ಎರಡು ಅವಧಿಯಲ್ಲಿ ವೃತ್ತವೊಂದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರು ಇಡುವುದಿರಲಿ, ಕ್ಷೇತ್ರದ ಯಾವೊಂದು ಗ್ರಾಮದಲ್ಲೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗದೆ ಇರುವುದು ಅವರ ದಲಿತರ ಮೇಲಿನ ಪ್ರೀತಿ ಸಾಕ್ಷಿಕರಿಸಿದೆ’ ಎಂದು ಟೀಕಿಸಿದರು.
‘ಶಿಕ್ಷಣ, ಉದ್ಯೋಗ, ರೈತರ, ಮಹಿಳೆಯರ, ಕಾರ್ಮಿಕರ ನೋವು ನಲಿವುಗಳಿಗೆ ಸ್ಪಂದಿಸದೆ ಹಣದ ಅಮಲಿನಲ್ಲಿ ಕೋಮುವಾದ ಸೃಷ್ಟಿಸುತ್ತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಭೂಗಳ್ಳತನಕ್ಕೆ ಮುಂದಾಗಿವೆ. ಗುಡಿ ಗುಂಡಾರ, ಸೀರೆ ಉಡಿಸುವ, ಉಡಿ ತುಂಬುವ ಪೈಶಾಚಿಕ ಕೃತ್ಯಗಳಿಂದ ಹೊರಬಂದು ಅಭಿವೃದ್ಧಿ ಪಟ್ಟಿ ಹಿಡಿದು ಮತ ಕೇಳಲು ಮುಂದಾಗಬೇಕು’ ಎಂದು ಬಹಿರಂಗತ ಸವಾಲು ಹಾಕಿದರು.
ಸಿಪಿಐ(ಎಂಎಲ್) ರೆಡ್ ಸ್ಟಾರ್ ಪ್ರಧಾನ ಕಾರ್ಯದರ್ಶಿ ಕೆ.ಎನ್. ರಾಮಚಂದ್ರನ್, ವೆಲ್‌ಫೇರ್‌ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ತಾಜುದ್ದೀನ್ ಹುಮನಾಬಾದ್, ರೈತ ಮುಖಂಡ ಅಮರಣ್ಣ ಗುಡಿಹಾಳ ಮಾತನಾಡಿ, ‘ಈ ಬಾರಿ ಜನಪರ ಹೋರಾಟ ನಡೆಸುತ್ತ, ಸಾಮಾನ್ಯರ ಪರ ಹೋರಾಟ ನಡೆಸುತ್ತ 128ಕ್ಕೂ ಹೆಚ್ಚು ಬಾರಿ ಜೈಲಿಗೆ ಹೋಗಿ ಬಂದಿರುವ ಮಾನಸಯ್ಯ ಅವರನ್ನು ಬೆಂಬಲಿಸುವಂತೆ’ ಮನವಿ ಮಾಡಿದರು.
ಜನಾಂದೋಲನ ಮಹಾಮೈತ್ರಿ ಸಂಚಾಲಕ ಎಂ.ಆರ್. ಬೇರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟನೆಗಳ ಮುಖಂಡರಾದ ಲಿಂಗಪ್ಪ ಪರಂಗಿ, ಜಾನ್ ವೆಸ್ಲಿ, ಕೆ. ನಾಗಲಿಂಗಸ್ವಾಮಿ, ಚನ್ನಬಸವ ಜಾನೆಕಲ್, ತಿಪ್ಪರಾಜ ಗೆಜ್ಜಲಗಟ್ಟಾ, ಶೇಖರಯ್ಯ ಗೆಜ್ಜಲಗಟ್ಟಾ, ಎಂ.ಡಿ. ಅಮೀರಅಲಿ, ಸೈಯದ್ ಜಾಫರ್‌ಹುಸೇನ, ರಾಜಾ ನಾಯಕ, ಅಜೀಜಸಾಬ ಜಹಗೀರದಾರ, ಡಿ.ಎಚ್. ಪೂಜಾರ, ಚಿನ್ನಪ್ಪ ಕೊಟ್ರಿಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.