ADVERTISEMENT

ಜೀವ ಕಳೆ ಪಡೆದುಕೊಂಡ ಕುಡಿಯುವ ನೀರಿನ ಮುಖ್ಯ ಕೆರೆ

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ತಪ್ಪಿದ ಜಲ ಸಂಕಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 15:50 IST
Last Updated 10 ಮಾರ್ಚ್ 2024, 15:50 IST
ಜೀವ ಕಳೆ ಪಡೆದುಕೊಂಡ ಬರಿದಾಗಿದ್ದ ಮಸ್ಕಿ ಪಟ್ಟಣದ ಕುಡಿಯುವ ನೀರಿನ ಯೋಜನೆಯ ಮುಖ್ಯ ಕೆರೆ
ಜೀವ ಕಳೆ ಪಡೆದುಕೊಂಡ ಬರಿದಾಗಿದ್ದ ಮಸ್ಕಿ ಪಟ್ಟಣದ ಕುಡಿಯುವ ನೀರಿನ ಯೋಜನೆಯ ಮುಖ್ಯ ಕೆರೆ   

ಮಸ್ಕಿ: ಪಟ್ಟಣದ ಜನತೆಗೆ ನೀರು ಪೂರೈಸುವ ಮುಖ್ಯ ಜಲಮೂಲ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕೆರೆಯಲ್ಲಿ ಭಾನುವಾರ ಸಂಜೆ ವೇಳೆ 14 ಅಡಿ ನೀರು ಸಂಗ್ರಹವಾಗಿದೆ. ಕೆರೆ ಭರ್ತಿಗೆ ಇನ್ನೂ ಮೂರು ದಿನ ಬೇಕಾಗಿದೆ. ಬರಿದಾಗಿದ್ದ ಕುಡಿಯುವ ನೀರಿನ ಕೆರೆ ಜೀವ ಕಳೆ ಪಡೆದುಕೊಂಡಿದೆ. ಕೆರೆ ತುಂಬುತ್ತಿದ್ದರಿಂದ ಪುರಸಭೆ ಆಡಳಿತ ನಿಟ್ಟುಸಿರು ಬಿಟ್ಟಿದೆ.

ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆ ಮೂಲಕ 1200 ಕ್ಯೂಸೆಕ್‌ ನೀರು ಹರಿಸಲಾಗಿತ್ತು.

15 ದಿನಗಳಿಂದ ಬರಿಗಾಗಿದ್ದ ಮುಖ್ಯ ಕೆರೆಯಲ್ಲಿ ನೀರು ತುಂಬಿಸಲು ಪುರಸಭೆ ಆಡಳಿತ ಎಡದಂಡೆ ಮುಖ್ಯ ಕಾಲುವೆಗೆ 7 ಪಂಪ್‌ ಸೆಟ್‌ ಗಳನ್ನು ಹಚ್ಚಿ ಕೆರೆ ಭರ್ತಿಮಾಡಲು ಚಾಲನೆ ನೀಡಲಾಗಿತ್ತು. 28 ಅಡಿ ನೀರು ಸಂಗ್ರಹ ಸಾಮಾರ್ಥ್ಯದ ಕೆರೆಯಲ್ಲಿ 14 ಅಡಿ ನೀರು ಸಂಗ್ರಹವಾಗಿದೆ. ಜಾಕವೆಲ್‌ ಮೂಲಕ ಕೆಲ ವಾರ್ಡ್‌ ಗಳಿಗೆ ಭಾನುವಾರ ಬೆಳಿಗ್ಗೆಯಿಂದಲೇ ಕುಡಿಯಲು ನೀರು ಪೂರೈಸಲಾಗುತ್ತಿದ್ದರಿಂದ ಪಟ್ಟಣದ ಜನರಿಗೆ ನೀರಿನ ಬರ ನಿವಾರಣೆಯಾದಂತಾಗಿದೆ.

ADVERTISEMENT

ಮುಖ್ಯ ಕೆರೆ ಭರ್ತಿಯಾದ ನಂತರ ಪಕ್ಕದಲ್ಲಿರುವ ಮತ್ತೊಂದು ಕೆರೆ ತುಂಬಿಸಿಕೊಳ್ಳಲು ಪುರಸಭೆ ಆಡಳಿತ ಸಿದ್ಧತೆ ನಡೆಸಿದೆ.

ಎರಡು ಕೆರೆಗಳು ಭರ್ತಿಗೊಂಡರೆ 38 ಅಡಿ ನೀರು ಲಭ್ಯವಾಗಲಿದ್ದು ಬರುವ ಬೇಸಿಗೆ ದಿನಗಳಲ್ಲಿ ಲಭ್ಯವಿರುವ ನೀರು ಮಿತ ಬಳಕೆ ಮಾಡಿದರೆ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಠಿಯಾಗುವುದಿಲ್ಲ. ಲಭ್ಯವಿರುವ ನೀರನ್ನು ಪುರಸಭೆ ಆಡಳಿತ ನೀರು ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ವಾಟರ್‌ ಮನ್ ಗಳಿಗೆ ತಾಕಿತು ಮಾಡಬೇಕು ಎಂದು ಸಾರ್ವಜನಿ ಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರು ನೀರನ್ನು ಪೋಲಾಗದಂತೆ ನೋಡಿಕೊಳ್ಳಬೇಕು ಹಾಗೂ ಕೆರೆಯ ನೀರನ್ನು ಮಿತವಾಗಿ ಬಳಸುವ ಮೂಲಕ ಮುಂಬರುವ ದಿನಗಳಲ್ಲಿ ನೀರಿನ ಅಭಾವ ನಿಗಿಸಲು ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎಸ್.‌ ಬಿ. ತೋಡಕರ್‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.