ದೇವದುರ್ಗ: ತಾಲೂಕಿನ ಕ್ಯಾದಿಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗೇರದೊಡ್ಡಿ ಗ್ರಾಮದಲ್ಲಿ 380 ಹೆಚ್ಚು ಮತದಾರರಿದ್ದು, ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಲು ತಾಲೂಕು ಆಡಳಿತಕ್ಕೆ ನಿರ್ಲಕ್ಷ್ಯ ವಹಿಸಿದ ತೋರಿದ್ದಲ್ಲಿ, ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಹಾಕುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮುಖಂಡರು ಗುರುವಾರ ಪತ್ರಿಕೆ ಹೇಳಿಕೆ ನೀಡಿದ್ದು, ‘ಗ್ರಾಮದಲ್ಲಿ 380ಕ್ಕೂ ಹೆಚ್ಚು ಮತದಾರರು ಇದ್ದು, ಗ್ರಾಮದ ಮತದಾರರು 8 ಕಿ.ಮೀ. ದೂರದ ಕುರ್ಲೆರದೊಡ್ಡಿಗೆ ಹೋಗಿ ಮತ ಹಾಕುವಂತಹ ಪರಿಸ್ಥಿತಿ ಇದೆ. ಪ್ರತಿ ಚುನಾವಣೆಯಲ್ಲಿ ಮತದಾರರಿಗೆ ಸಮಸ್ಯೆ ಎದುರಾಗುತ್ತಿದ್ದು ಅದರಲ್ಲಿ ವಯಸ್ಕರಿಗೆ, ಗರ್ಭಿಣಿಯರಿಗೆ ಮತ್ತು ಅಂಗವಿಕಲರಿಗೆ ಸಮಸ್ಯೆಯಾಗುತ್ತದೆ. ಈ ಕುರಿತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದೇವೆ’ ಗ್ರಾಮಸ್ಥ ಪಂಪಣ್ಣ ತಿಳಿಸಿದರು.
ಗ್ರಾಮದಲ್ಲೇ ಮತಗಟ್ಟೆ ಕೇಂದ್ರ ಸ್ಥಾಪಿಸಲು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಮತದಾನ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.
‘ಸಿಂಗೇರದೊಡ್ಡಿ ಗ್ರಾಮದಲ್ಲಿ ಮತಗಟ್ಟೆ ಯಾಕೆ ಸ್ಥಾಪಿಸಲಾಗುತ್ತಿಲ್ಲ ಎಂಬುದು ಕಾರಣ ಗೊತ್ತಾಗುತ್ತಿಲ್ಲ. ಇಲ್ಲಿನ ಮತದಾರರು ಗ್ರಾಮ ಪಂಚಾಯತಿ ಸೇರಿದಂತೆ ಇತರ ಎಲ್ಲ ಚುನಾವಣೆಗಳಿಗೆ 8ಕಿ.ಮೀ. ದೂರದ ಕುರ್ಲೆರದೊಡ್ಡಿ ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವ ಪರಿಸ್ಥಿತಿ ಇದೆ. ಹದಗೆಟ್ಟ ರಸ್ತೆ, ಸಾರಿಗೆ ವ್ಯವಸ್ಥೆ ಕೊರತೆ ಮಧ್ಯೆ ಇಲ್ಲಿವರಿಗೂ ಮತದಾನ ಮಾಡಿದ ಉದಾಹರಣೆಗಳಿವೆ’ ಎಂದರು.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಕೇಂದ್ರ ಸ್ಥಾಪನೆ ಮಾಡುವವರಿಗೂ ಗ್ರಾಮಸ್ಥರು ಮತದಾನ ಮಾಡದಿರಲು ನಿರ್ಧರಿಸಿದ ನಂತರ ಆಗಿನ ತಹಶೀಲ್ದಾರರು ಮತ್ತು ಇತರ ಅಧಿಕಾರಿಗಳು ಗ್ರಾಮಸ್ಥರಿಗೆ ಮುಂದಿನ ಚುನಾವಣೆ ಬರುವಷ್ಟರಲ್ಲಿ ಗ್ರಾಮಕ್ಕೆ ಮತದಾನ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಮತದಾನಕ್ಕೆ ಒಪ್ಪಿಗೆ ನೀಡಲಾಯಿತು. ಆದರೆ ಕಳೆದ 5 ವರ್ಷದಿಂದ ಭರವಸೆ ನೀಡಿದ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ. ಮತದಾನ ಬಹಿಷ್ಕರಿಸದೇ ಬೇರೆ ಮಾರ್ಗ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮತದಾನ ಜಾಗೃತಿಗಾಗಿ ಸರ್ಕಾರ ಏನೆಲ್ಲ ಕಸರತ್ತು ಮಾಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮದ ಮತದಾರ ಶೇಖರಪ್ಪ ಸಿಂಗೇರದೊಡ್ಡಿ ಆರೋಪಿಸಿದರು.
‘ಮತ ಹಾಕಿ ಅಂತ ಊರೆಲ್ಲ ಡಂಗುರ ಸಾರುತ್ತಾರೆ. ಮತಗಟ್ಟೆ ಕೇಂದ್ರ ಸ್ಥಾಪಿಸಲು ಕೋರಿದರೆ, ತಮ್ಮ ಕೈಯಲ್ಲಿ ಏನೂ ಇಲ್ಲ. ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಬೇಕೆಂದು ಹೇಳುತ್ತಾರೆ. ಅದಕ್ಕೆ ಈ ಸಲ ಚುನಾವಣೆಯಲ್ಲಿ ಮತ ಹಾಕಲ್ಲ’ ಎಂದು ಗ್ರಾಮದ ಹಿರಿಯ ಮತದಾರ ಮಾನಶಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.