ರಾಯಚೂರು: ನಗರದ ಗಂಗಾನಿವಾಸ ರಸ್ತೆಯಲ್ಲಿರುವ ಬೇರೂನ್ ಕಿಲ್ಲಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಕ ಶಾಲೆ ಹೆಸರಿಗಷ್ಟೆ ಮಾದರಿಯಾಗಿದೆ. ಆದರೆ, ಅಲ್ಲಿನ ವಾತಾವರಣ ವ್ಯಾಸಂಗಕ್ಕೆ ಯೋಗ್ಯವಲ್ಲದ ಮಟ್ಟಿಗೆ ಹಾಳಾಗಿದೆ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ 220 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 10 ಮಂಜೂರಾದ ಶಿಕ್ಷಕರ ಹುದ್ದೆ ಇದ್ದು, ಎಲ್ಲವೂ ಭರ್ತಿಯಾಗಿವೆ. ಆದರೆ 18 ಕೋಣೆಗಳಿದ್ದರೂ ಬಳಕೆಯಲ್ಲಿರುವುದು 8 ಮಾತ್ರ. ಉಳಿದ 10 ಕೋಣೆಗಳು ಶಿಥಿಲಗೊಂಡಿವೆ. ಬಳಕೆಯಲ್ಲಿರುವ 5 ಮತ್ತು 6ನೇ ತರಗತಿಯ ಕೊಠಡಿಗಳ ಛಾವಣಿಯ ಗಾರೆ ಉದುರಿ ಬೀಳುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ ಆದರೂ ಇಲ್ಲೆ ತರಗತಿಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಬಹುತೇಕ ಕೋಣೆಗಳ ಕಿಟಕಿ ಬಾಗಿಲುಗಳು ಮುರಿದಿವೆ.
ಶಿಥಿಲಗೊಂಡ ಒಂದು ಕೋಣೆಯ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಉಳಿದ ಕೋಣೆಗಳಲ್ಲಿ ಕಲ್ಲು ಮಣ್ಣಿನ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯ ಕುಸಿದು ಬಿದ್ದು ಹಲವು ತಿಂಗಳುಗಳಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯ ಬಯಲು ಇಲ್ಲವೆ ಶಿಥಿಲಗೊಂಡು ಅನುಪಯುಕ್ತವಾಗಿರುವ ಕೊಠಡಿಗಳನ್ನು ಬಹಿರ್ದೆಸೆಗೆ ಬಳಸುತ್ತಾರೆ.
ಶಾಲಾ ಆವರಣಕ್ಕೆ ಒಂದು ವರ್ಷದ ಹಿಂದೆ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ, ಆವರಣದ ಆಟದ ಮೈದಾನದಲ್ಲಿ ದಪ್ಪ ಕಲ್ಲುಗಳು, ಗಾರೆ ಚೂರು, ಮುಳ್ಳು ಬೆಳೆದಿರುವುದರಿಂದ ಮಕ್ಕಳು ಆಟವಾಡಲು ಆಗುತ್ತಿಲ್ಲ. ಶಾಲೆಗೆ ನೀರಿನ ವ್ಯವಸ್ಥೆ ಇದ್ದರೂ, ಓವರ್ ಹೆಡ್ ಟ್ಯಾಂಕ್ ಇಲ್ಲ. ನೀರಿನ ದೊಡ್ಡ ಸಿಂಥೆಟಿಕ್ ಟ್ಯಾಂಕ್ ಆವರಣದಲ್ಲಿ ಅನಾಥವಾಗಿ ಬಿದಿದೆ.
‘ಶಿಥಿಲಗೊಂಡ ಕೊಠಡಿಗಳನ್ನು ಕೆಡವಿ ಹೊಸದಾಗಿ ಕೋಣೆಗಳನ್ನು ನಿರ್ಮಿಸಿಕೊಡುವಂತೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹೊಸ ಕೊಠಡಿ ನಿರ್ಮಾಣಕ್ಕೆ ಡಿಡಿಪಿಐ ಅವರಿಗೆ ಮನವಿ ಮಾಡಲಾಗಿದೆ. ಬಜೆಟ್ ಕೊರತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರಪ್ಪ ಶಿವಂಗಿ ತಿಳಿಸಿದರು.
ಶಾಲೆಯ ಕೊಠಡಿ ವಿವರ
18 ಒಟ್ಟು - ಶಾಲೆಯಲ್ಲಿರುವ ಕೊಠಡಿಗಳ ಸಂಖ್ಯೆ
10 ಒಟ್ಟು - ಕೊಠಡಿಗಳು ಶಿಥಿಲಗೊಂಡಿವೆ
220 - ವಿದ್ಯಾರ್ಥಿಗಳು ವ್ಯಾಸಂಗ
ಯಾರು ಬುದ್ಧಿ ಹೇಳೋದು?
‘ಮಕ್ಕಳು ಕಲಿಯುವ ಶಾಲೆ ಎಂಬ ಜ್ಞಾನವೂ ಇಲ್ಲದೆ ಕೊಠಡಿಗಳ ಬಾಗಿಲ ಮುಂದೆಯೇ ಶೌಚ ಮಾಡುತ್ತಾರೆ. ಗುಟ್ಕಾ ಜಗಿದು ಉಗಿಯುತ್ತಾರೆ. ಮದ್ಯಪಾನ ಮಾಡಲು ಕೊಠಡಿಯ ಬೀಗವನ್ನೂ ಮುರಿದಿದ್ದಾರೆ’ ಎಂದು ಶಾಲೆಯ ಸ್ವಚ್ಛತಾ ಸಹಾಯಕಿ ಯಂಕಮ್ಮ ದೂರಿದರು. ‘ಇವರಿಗೆ ಯಾರು ಬುದ್ಧಿ ಹೇಳೋದು’ ಎಂದು ಬೇಸರ ವ್ಯಕ್ತಪಡಿಸಿದರು.
ಕಾಳಜಿ ಇಲ್ಲ : ‘1961ರಲ್ಲೇ ಪ್ರಾರಂಭವಾದ ಶಾಲೆ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಶೌಚದ ಗಬ್ಬು ವಾಸನೆಯಲ್ಲೆ ಮಕ್ಕಳು ವ್ಯಾಸಂಗ ಮಾಡಬೇಕಿದೆ. ಮೈದಾನವನ್ನು ಸಮತಟ್ಟು ಮಾಡಿಸುವ ಉಸಬಾರಿಯನ್ನು ಯಾರು ತೆಗೆದುಕೊಂಡಿಲ್ಲ. ಇದರಿಂದ ವಿಷಜಂತುಗಳು ಹಾವಳಿ ಹೆಚ್ಚಿದೆ’ ಎಂದು ಬೇರೂನ್ ಕಿಲ್ಲಾ ನಿವಾಸಿ ಚಂದ್ರ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.