ADVERTISEMENT

ಸಂಗೀತಕ್ಕೂ ತಟ್ಟಿದ ಬರ ಸಂಕಷ್ಟ: ಮುಚ್ಚಿದ ಸ್ವರ ಸಾಧನಾ ಸಂಗೀತ ಶಾಲೆ

ಬೆಂಗಳೂರು ಗಾರ್ಮೆಂಟ್ ನೌಕರಿ ಸೇರಿದ ಕಲಾವಿದ

ಬಸವರಾಜ ಬೋಗಾವತಿ
Published 20 ಮೇ 2019, 11:22 IST
Last Updated 20 ಮೇ 2019, 11:22 IST
ಮಾನ್ವಿ ಪಟ್ಟಣದ ಐಎಂಎ ಭವನದಲ್ಲಿರುವ ಸ್ವರ ಸಾಧನಾ ಸಂಗೀತ ಪಾಠಶಾಲೆ
ಮಾನ್ವಿ ಪಟ್ಟಣದ ಐಎಂಎ ಭವನದಲ್ಲಿರುವ ಸ್ವರ ಸಾಧನಾ ಸಂಗೀತ ಪಾಠಶಾಲೆ   

ಮಾನ್ವಿ: ಮಾನ್ವಿ ತಾಲ್ಲೂಕಿನಲ್ಲಿ ಮೂರು ವರ್ಷಗಳ ನಿರಂತರ ಬರಗಾಲದಿಂದ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸಲಾಗದೆ ರೈತರು, ಕೃಷಿ ಕೂಲಿ ಕಾರ್ಮಿಕರು ಬೆಂಗಳೂರು, ಮುಂಬೈ, ಪುಣೆ ಸೇರಿದಂತೆ ಮುಂತಾದ ನಗರ ಪ್ರದೇಶಗಳಿಗೆ ಗುಳೆ ಹೋಗುವುದು ಸಾಮಾನ್ಯ.

ಮಾನ್ವಿ ಪಟ್ಟಣದ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಡಿ.ವೆಂಕೋಬ ಮಾನ್ವಿಕರ್‌ ಕೌಟಂಬಿಕ ಆರ್ಥಿಕ ಸಮಸ್ಯೆಯಿಂದ ಬೆಂಗಳೂರಿನ ಗಾರ್ಮೆಂಟ್‌ ಕಾರ್ಖಾನೆಯಲ್ಲಿ ನೌಕರಿಗೆ ಸೇರಿರುವುದು ಬರ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಸಂಗೀತ ಕಾರ್ಯಕ್ರಮ ಗಳನ್ನು ಪ್ರದರ್ಶಿಸಿದ್ದ ಡಿ.ವೆಂಕೋಬ, ತಾಲ್ಲೂಕಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿದ್ದಾರೆ.

ADVERTISEMENT

ಪಟ್ಟಣದ ಐಎಂಎ ಭವನದಲ್ಲಿ ಅವರು ನಡೆಸುತ್ತಿದ್ದ ಸ್ವರ ಸಾಧನಾ ಸಂಗೀತ ಶಾಲೆಯನ್ನು ಈಗ ಮುಚ್ಚಲಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ, ಜಿಲ್ಲೆಯಲ್ಲಿ ಕಲಾವಿದರು ಮತ್ತು ಸಂಗೀತ ಕ್ಷೇತ್ರಕ್ಕೆ ಸೂಕ್ತ ಮನ್ನಣೆ ಸಿಗದೆ ಬೇಸತ್ತ ಡಿ.ವೆಂಕೋಬ ತಮ್ಮ ಸಂಸ್ಥೆಯನ್ನು ಮುಚ್ಚಿ ಬದುಕು ಸಾಗಿಸಲು ಬೆಂಗಳೂರು ನಗರಕ್ಕೆ ಗುಳೆ ಹೋಗಿದ್ದಾರೆ.

90ರ ದಶಕದಲ್ಲಿ ಗದುಗಿನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ಡಿ.ವೆಂಕೋಬ, ಸಂಗೀತದಲ್ಲಿ ‘ವಿದ್ವತ್‌’ ಪದವೀಧರರಾಗಿದ್ದಾರೆ. ಉತ್ತಮ ಕಂಠಸಿರಿಯ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಹಾರ್ಮೋನಿಯಂ ವಾದ್ಯ ನುಡಿಸುವಲ್ಲಿ ಅವರು ಪಾಂಡಿತ್ಯ ಹೊಂದಿದ್ದಾರೆ.

1996ರಲ್ಲಿ ಅವರು ಮಾನ್ವಿ ಪಟ್ಟಣದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠ ಶಾಲೆಯನ್ನು ಆರಂಭಿಸಿದ್ದರು. 2016ರಲ್ಲಿ ಪಟ್ಟಣದ ಪ್ರಗತಿ ಪಿಯು ಕಾಲೇಜು ಹತ್ತಿರ ಇರುವ ಐಎಂಎ ಭವನದಲ್ಲಿ ಸ್ವರ ಸಾಧನಾ ಸಂಗೀತ ಪಾಠಶಾಲೆ ತೆರೆದು ಸಂಗೀತ ಆಸಕ್ತರು ಕಲಿಯಲು ಅನುಕೂಲ ಕಲ್ಪಿಸಿದ್ದರು. ಇವರಿಂದ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಸಂಗೀತ ಗಾಯನ ಮತ್ತು ವಿವಿಧ ವಾದ್ಯಗಳನ್ನು ನುಡಿಸುವಲ್ಲಿ ಜೂನಿಯರ್‌ ಮತ್ತು ಸೀನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಪಾಸಾಗಿ ಕಲಾವಿದರಾಗಿ ರೂಪುಗೊಂಡಿದ್ದಾರೆ.

‘ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಪ್ರವೇಶ ಪಡೆದ ಬೆರಳೆಣಿಕೆ ಸಂಖ್ಯೆಯ ವಿದ್ಯಾರ್ಥಿಗಳು ಸಂಸ್ಥೆಗೆ ನೀಡುತ್ತಿದ್ದ ಶುಲ್ಕವೂ ಕಡಿಮೆ ಇತ್ತು. ಆದರೂ ಸಂಗೀತದ ಮೇಲಿನ ಅಭಿಮಾನದಿಂದ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದೆ. ದಿನಗಳುರುಳಿದಂತೆ ಕುಟುಂಬ ನಿರ್ವಹಣೆಗೆ ಕಷ್ಟವಾಯಿತು. ಬೇರೆ ವೃತ್ತಿ ಮಾಡಲು ಸ್ಥಳೀಯ ಬರಗಾಲ ಪರಿಸ್ಥಿತಿ ಅಡ್ಡಿಯಾಯಿತು. ಯುವಕನಾಗಿದ್ದಾಗ ಟೇಲರಿಂಗ್‌ ವೃತ್ತಿಯ ಅನುಭವ ಇದ್ದ ಕಾರಣ ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಪಡೆಯಲು ನೆರವಾಯಿತು. ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಮಾಸಿಕ₹ 15ಸಾವಿರ ಸಂಬಳ ನೀಡುತ್ತಿದ್ದಾರೆ’ ಎಂದು ಡಿ.ವೆಂಕೋಬ ಹೇಳಿದರು.

‘ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ತಮ್ಮ ಸಂಸ್ಥೆ ವತಿಯಿಂದ ಮಾನ್ವಿ ಪಟ್ಟಣದಲ್ಲಿ ವಚನ ಗಾಯನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹ ಧನ ನೀಡದೆ ಅನ್ಯಾಯ ಮಾಡಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

* ಸಂಗೀತ ಕಲಾವಿದರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೂಪಿಸುವ ಯೋಜನೆ ಗಳು ಪಟ್ಟಭದ್ರ ಹಿತಾಸಕ್ತಿ ಗಳಿಗೆ ಸೀಮಿತವಾಗಬಾರದು. ಪ್ರತಿಭಾ ವಂತರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು

ಡಿ.ವೆಂಕೋಬ ಮಾನ್ವಿಕರ್,ಸಂಗೀತ ಕಲಾವಿದ , ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.