ರಾಯಚೂರು:‘ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಎನ್.ಮಹಾವೀರ ಅವರು ತರಕಾರಿ ಮಾರುಕಟ್ಟೆಯಲ್ಲಿನ ಮಳಿಗೆಗಳ ಬಾಡಿಗೆ, ಕಟ್ಟೆ, ನೆಲದ ಮೇಲೆ ಕುಳಿತುಕೊಂಡು ತರಕಾರಿ ಮಾರಾಟಗಾರರಿಂದ ಸಂಗ್ರಹಿಸಿದ ಶುಲ್ಕ ಸೇರಿ ಒಟ್ಟು ₹14 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ . ಇವತ್ತಿಗೂ ನಗರಸಭೆಗೆ ಬಾಕಿ ಪಾವತಿಸಿಲ್ಲ’ ಎಂದು ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಆರೋಪಿಸಿದರು.
ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಅಂಗಡಿಗಳ ವ್ಯಾಪಾರದ ಗುತ್ತಿಗೆ ಪಡೆದಿದ್ದು 2019ರಿಂದ ಇದುವರೆಗೆ ಒಟ್ಟು 31 ತಿಂಗಳಗಳ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ನಗರಸಭೆ ಬಾಕಿ ಉಳಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭೆ ನೋಟಿಸ್ ಜಾರಿಗೊಳಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಸಂಬಂಧಿಸಿದ ಹೋರಾಟಕ್ಕೆ ನಾನು ಎನ್ ಮಹಾವೀರ ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ಆರೋಪಿಸಿದ್ದಾರೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಹೇಳಿದ್ದಾರೆ. ನಾನು ಕಾನೂನು ಹೋರಾಟ ನಡೆಸಲು ಬದ್ಧನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ನಾನು ಯಾವುದೇ ರೀತಿಯಲ್ಲಿ ಅಕ್ರಮವಾಗಿ ಸಂಪಾದನೆ ಮಾಡಿಲ್ಲ. 1992ರಿಂದ ನಾನು ಗುತ್ತಿಗೆದಾರನಾಗಿದ್ದು, ಕಾನೂನು ಬದ್ಧವಾಗಿ ತೆರಿಗೆ ಪಾವತಿಸುತ್ತಾ ಬಂದಿದ್ದೇನೆ ಮಹಾವೀರ ಅವರು ಜಾರಿ ನಿರ್ದೇಶನಾಲಯ ಹಾಗೂ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದು ತನಿಖೆಗೆ ಸಹಕರಿಸುವೆ’ ಎಂದು ಹೇಳಿದರು.
ಐಡಿಎಸ್‍ಎಂಟಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಸದಸ್ಯ ಸಾಜೀದ್ ಸಮೀರ್, ಶಂಕರೆಡ್ಡಿ, ಹಾಜಿ, ಕೃಷ್ಣಮೂರ್ತಿ, ಸಾದೀಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.