ADVERTISEMENT

ರಾಯಚೂರು | 1.50 ಟನ್ ಭಾರದ ಕಲ್ಲು ಎಳೆದ 19 ಜೋಡಿ ಎತ್ತುಗಳು

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ

ಚಂದ್ರಕಾಂತ ಮಸಾನಿ
Published 22 ಜೂನ್ 2024, 6:34 IST
Last Updated 22 ಜೂನ್ 2024, 6:34 IST
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 1.50 ಟನ್ ಭಾರದ ಕಲ್ಲು ಎಳೆದ ದೇವದುರ್ಗ ತಾಲ್ಲೂಕಿನ ರಾಮದುರ್ಗ ಗ್ರಾಮದ ಎತ್ತುಗಳು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 1.50 ಟನ್ ಭಾರದ ಕಲ್ಲು ಎಳೆದ ದೇವದುರ್ಗ ತಾಲ್ಲೂಕಿನ ರಾಮದುರ್ಗ ಗ್ರಾಮದ ಎತ್ತುಗಳು   

ರಾಯಚೂರು: ಮುನ್ನೂರು ಕಾಪು ಸಮಾಜದ ವತಿಯಿಂದ ಇಲ್ಲಿಯ ರಾಜೇಂದ್ರ ಗಂಜ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಶುಕ್ರವಾರ ಚಾಲನೆ ದೊರೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಎತ್ತಿನ ಜೋಡಿಗಳು ನೆತ್ತಿ ಸುಡುವ ಬಿಸಿಲಲ್ಲೇ ಭಾರದ ಕಲ್ಲು ಎಳೆಯುವ ಮೂಲಕ ಸಾಮರ್ಥ್ಯ ಪ್ರದರ್ಶಿಸಿದವು.

ಸುಡು ಬಿಸಿಲನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಕೇಕೆ ಹಾಕಿ ಎತ್ತುಗಳ ಬಲ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು. ಆನೆ ಮರಿ ಗಾತ್ರದ ದೇಸಿ, ಜರ್ಸಿ ಸೇರಿದಂತೆ ವಿವಿಧ ತಳಿಯ ದೊಡ್ಡ ಎತ್ತುಗಳು ಪ್ರೇಕ್ಷಕರ ಕಣ್ಮನ ಸೆಳೆದವು.

ರಾಜ್ಯದ ವಿವಿಧ ಜಿಲ್ಲೆಗಳ 19 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ರಾಯಚೂರು, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಿಂದ ಬಂದಿದ್ದ ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು 1.50 ಟನ್ ಭಾರದ ಕಲ್ಲು ಎಳೆದು ಶಕ್ತಿ ಪ್ರದರ್ಶನ ನೀಡಿದವು.

ADVERTISEMENT

ಮಾಲೀಕರು ಮರದ ಗಾತ್ರದ ನೊಗಕ್ಕೆ ಪೂಜೆ ಸಲ್ಲಿಸಿ ತೆಂಗು ಒಡೆದು ಹೂಮಾಲೆ ಹಾಕಿ ಸ್ಪರ್ಧಾ ಸ್ಥಳಕ್ಕೆ ತಂದರು. ಸ್ಪರ್ಧಾ ಸ್ಥಳದಲ್ಲೇ ಎತ್ತುಗಳಿಗೆ ನೊಗ ಕಟ್ಟಿದರು. ನೊಗ ಹಾಗೂ ಭಾರದ ಕಲ್ಲಿಗೆ ಸರಪಳಿಯಿಂದ ಬಿಗಿದು ಓಡಿಸಿದರು.

ಸ್ಪರ್ಧೆ ಆರಂಭವಾಗುತ್ತಿದ್ದಂತೆಯೇ ಎತ್ತುಗಳ ಹಿಂದೆ ನಿಂತು ಬಾರಕೋಲಿನಿಂದ ಬಲವಾಗಿ ಬೀಸಿದರು. ಬಾರಕೋಲಿನ ಶಬ್ದಕ್ಕೆ ಎತ್ತುಗಳು ಹೆದರಿ ಜೋರಾಗಿ ಓಡಿದವು. ಸುಲಭವಾಗಿ ಜಗ್ಗಲು ಸಾಧ್ಯವಾಗದ ಎತ್ತುಗಳು ತಿಣುಕಿ ಸ್ಥಳದಲ್ಲೇ ಸಗಣಿ ಹಾಕಿದವು. ಗುರಿ ತಲುಪಿಸಲು ಎತ್ತುಗಳನ್ನು ಎಳೆದುಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಸ್ಪರ್ಧೆ ಮುಗಿಯುತ್ತಿದ್ದಂತೆಯೇ ಮಾಲೀಕರು ಎತ್ತುಗಳ ಮೈಮೇಲೆ ಕೊಡಗಳಲ್ಲಿ ತಂದಿದ್ದ ನೀರು ತಂದು ಸುರಿದರು. ಬೆವತು ಹೋಗಿದ್ದ ಜಾನುವಾರುಗಳ ದೇಹ ತಂಪು ಮಾಡಿದರು.

ಗಜ ಗಾತ್ರದ ಎತ್ತುಗಳು ಪ್ರೇಕ್ಷಕರ ಗಮನ ಸೆಳೆದವು. ದೇಸಿ ತಳಿಯ ಎತ್ತುಗಳ ಭಾರವಾದ ಕಲ್ಲುಗಳನ್ನು ಸಲೀಸಲಾಗಿ ಎಳೆದವು. ಮಿಶ್ರತಳಿಯ ಎತ್ತುಗಳು ಭಾರ ಎಳೆಯಲು ಪರದಾಡಿದವು. ಎತ್ತುಗಳು ಗಾಬರಿಯಿಂದ ಓಡಿ ಹೋಗದಂತೆ ಮೈದಾನದ ಎರಡು ಬದಿಗೆ ಬೊಂಬುಗಳನ್ನು ಕಟ್ಟಲಾಗಿತ್ತು.

ಮಕ್ಕಳು ಆದಿಯಾಗಿ ಜನರು ಕುತೂಹಲದಿಂದ ಸ್ಪರ್ಧೆಯನ್ನು ವೀಕ್ಷಿಸಿದರು. ಕೆಲವರು ಸುರಕ್ಷತೆಯ ದೃಷ್ಟಿಯಿಂದ ಎಪಿಎಂಸಿಯ ಮಳಿಗೆ, ಅಂಗಡಿಗಳು ಹಾಗೂ ಗೋದಾಮುಗಳ ಕಟ್ಟಡಗಳ ಮೇಲೆ ಕುಳಿತು ದೃಶ್ಯವನ್ನು ವೀಕ್ಷಿಸಿದರು.

ಹಬ್ಬದ ರೂವಾರಿ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ ಸೇರಿದಂತೆ ಮುನ್ನೂರು ಕಾಪು ಸಮಾಜದ ಮುಖಂಡರು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಸಿದ್ದರು.

ಮುರಿದ ನೊಗ...

ಸಿರವಾರ ತಾಲ್ಲೂಕಿನ ನವಲಕಲ್‌ ಗ್ರಾಮದ ರೈತರೊಬ್ಬರ ಎತ್ತುಗಳು ಭಾರವಾದ ಕಲ್ಲು ಎಳೆಯುವ ಸಂದರ್ಭದಲ್ಲಿ ತುಂಡರಿಸಿತು. ತಕ್ಷಣ ಜಾನುವಾರು ಪಾಲಕರು ಎತ್ತುಗಳ ಕೊರಳಿನಿಂದ ತುಂಡಾದ ನೊಗ ಬಿಚ್ಚಿಕೊಂಡು ಸ್ಪರ್ಧೆಯಿಂದ ಹೊರಗೆ ಹೋದರು.

ಒಂದೂವರೆ ಟನ್‌ ಕಲ್ಲು ಎಳೆದು 30 ಅಡಿ ದೂರ ಬರುವಷ್ಟರಲ್ಲಿ ನೊಗ ತುಂಡಾಗಿ ಆತಂಕ ಸೃಷ್ಟಿಸಿತು. ನಂತರ ಸ್ಪರ್ಧಿಗಳು ಎತ್ತುಗಳೊಂದಿಗೆ ಕಣದಿಂದ ಹೊರಗೆ ಹೋದರು.

ಎತ್ತುಗಳಿಗೆ ಸೊಳ್ಳೆ ಪರದೆ

ರಾಷ್ಟ್ರ ಮಟ್ಟದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆಲಂಗಾಣದಿಂದ ಬಂದಿರುವ ಗಜಗಾತ್ರದ ಎತ್ತುಗಳಿಗೆ ಎಪಿಎಂಸಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ.

ಎತ್ತಿನ ಮಾಲೀಕರು ಅವುಗಳಿಗೆ ನೊಣ ಹಾಗೂ ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಿ ಸೊಳ್ಳೆ ಪರದೆ ಹಾಕಿದ್ದಾರೆ. ವಾಹನದಲ್ಲಿ ಭತ್ತದ ಹುಲ್ಲನ್ನು ತಂದು ಅವುಗಳಿಗೆ ಕೊಡುತ್ತಿದ್ದಾರೆ.

ಎತ್ತುಗಳ ಬೆಲೆ ₹8 ಲಕ್ಷದಿಂದ ₹10 ಲಕ್ಷ ವರೆಗೂ ಇರುವ ಕಾರಣ ಸೊಳ್ಳೆ ಪರದೆಯೊಳಗೆ ಒಂದು ಕಾಟ್‌ ಹಾಕಿ ಅವುಗಳೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿತು.

ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಎತ್ತುಗಳು ಭಾರದ ಕಲ್ಲು ಎಳೆಯುವಾಗ ನೊಗ ತುಂಡರಿಸಿತು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 1.50 ಟನ್ ಭಾರದ ಕಲ್ಲು ಎಳೆದ ರಾಯಚೂರು ತಾಲ್ಲೂಕಿನ ಮಾತಪಳ್ಳಿ ಗ್ರಾಮದ ಎತ್ತುಗಳು
ರಾಯಚೂರಿನ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಲು ಸೇರಿದ್ದ ಜನ
ರಾಯಚೂರಿನ ರಾಜೇಂದ್ರ ಗಂಜ್ ಆವರಣದಲ್ಲಿ ರೈತರೊಬ್ಬರು ಎತ್ತುಗಳಿಗೆ ಸೊಳ್ಳೆ ಪರದೆ ಕಟ್ಟಿದ್ದರು

ಯುವಕರಿಂದ ರೈತರಿಗೆ ಉಚಿತ ಭೋಜನ ಗಂಜ್‌ನಲ್ಲಿ ಎತ್ತುಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಬೃಹದಾಕಾರದ ಎತ್ತುಗಳ ವೀಕ್ಷಣೆಗೆ ಬಂದಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.