ADVERTISEMENT

ಕಳವು ಮಾಡಿದ್ದ 2 ಕೆ.ಜಿ ಚಿನ್ನಾಭರಣ ವಶ

ಸಿಂಧನೂರು ಶಹರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:46 IST
Last Updated 22 ಅಕ್ಟೋಬರ್ 2024, 14:46 IST
ಸಿಂಧನೂರು ಶಹರ ಠಾಣೆಯ ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿರುವ 2 ಕೆ.ಜಿ 5 ತೊಲೆ ಚಿನ್ನಾಭರಣ ಹಾಗೂ ₹40,150 ನಗದು ಪ್ರದರ್ಶಿಸಿದರು
ಸಿಂಧನೂರು ಶಹರ ಠಾಣೆಯ ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿರುವ 2 ಕೆ.ಜಿ 5 ತೊಲೆ ಚಿನ್ನಾಭರಣ ಹಾಗೂ ₹40,150 ನಗದು ಪ್ರದರ್ಶಿಸಿದರು   

ಸಿಂಧನೂರು: ಕಮೀಷನ್‌ ಆಧಾರದ ಮೇಲೆ ಮಾರಾಟಕ್ಕೆ ತಂದಿದ್ದ 2 ಕೆ.ಜಿ 5 ತೊಲೆ ಚಿನ್ನಾಭರಣವನ್ನು ತನ್ನ ಪಾಲುದಾರನಿಗೆ ಗೊತ್ತಾಗದಂತೆ ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಿಂಧನೂರು ಶಹರ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ‘ಅ.12ರಂದು ನಗರದ ಜೈನ್ ಧರ್ಮ ಶಾಲೆ ಕೋಣೆಯ ಕಪಾಟಿನಲ್ಲಿದ್ದ 1483.77 ಗ್ರಾಂ ಬಂಗಾರದ ಆಭರಣಗಳು ಕಳುವಾಗಿರುವ ಬಗ್ಗೆ ಸಿಂಧನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವುಕುಮಾರ ಎಚ್. ಹಾಗೂ ಹರೀಶ್, ಡಿವೈಎಸ್‍ಪಿ ಬಿ.ಎಸ್.ತಳವಾರ, ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ನೇತೃತ್ವದಲ್ಲಿ ಬಳಗಾನೂರು ಸಬ್‍ಇನ್‌ಸ್ಪೆಕ್ಟರ್ ಎರಿಯಪ್ಪ ಎ, ಸಿಬ್ಬಂದಿ ಆದಯ್ಯ, ಶರಣಪ್ಪ ರೆಡ್ಡಿ, ಅಫೀಜುಲ್ಲಾ, ವೀರಭದ್ರಪ್ಪ, ಅನಿಲಕುಮಾರ, ಹಜರತ್ ಅಲಿ, ಜಿ.ಪ್ರಕಾಶ, ಬಾಷಾ ನಾಯ್ಕ್, ಅಜೀಮ್‍ಪಾಷಾ ಅವರನ್ನು ಒಳಗೊಂಡು ವಿಶೇಷ ತಂಡ ರಚಿಸಲಾಗಿತ್ತು. ತಂಡವು ಅ.20ರಂದು ಆರೋಪಿ ನಿರ್ಮಲ್‌ಕುಮಾರ ಜೈನ್‍ನನ್ನು ಬಂಧಿಸಿದೆ. ಪ್ರಕರಣದಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ಮೌಲ್ಯದ ₹1.43 ಕೋಟಿ (2,056 ಗ್ರಾಂ) ಬಂಗಾರದ ಆಭರಣಗಳು ಹಾಗೂ ₹40,150 ನಗದನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ. ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ನೀಡಲಾಗುವುದು’ ಎಂದರು.

ಪ್ರಕರಣದ ವಿವರ: ‘ರಾಜಸ್ಥಾನ ಮೂಲದ ನಿರ್ಮಲ್‌ಕುಮಾರ ಜೈನ್ ಮತ್ತು ಧರ್ಮೇಶ್‌ ಕುಮಾರ ಅವರು ಕಮೀಷನ್ ಆಧಾರದ ಮೇಲೆ ಭರತ್‍ಕುಮಾರ ಜೈನ್ ಎಂಬುವವರಿಂದ ಸಿಕಂದರಾಬಾದ್‍ನಲ್ಲಿ ಬಂಗಾರದ ಆಭರಣಗಳನ್ನು ಪಡೆದು ಮಾರಾಟಕ್ಕಾಗಿ ಸಿಂಧನೂರಿಗೆ ಬಂದು ಜೈನ್‌ ಧರ್ಮ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ಜೈನ ಮಂದಿರಕ್ಕೆ ಪೂಜೆಗೆ ತೆರಳಿದ ಸಮಯದಲ್ಲಿ ನಿರ್ಮಲ್‌ಕುಮಾರ್‌, ಧರ್ಮಶಾಲೆಯ ಕಪಾಟಿನಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಮಾನ್ವಿಯ ಬಾಲಾಜಿ ಕಂಫರ್ಟ್ಸ್‌ ಲಾಡ್ಜ್‌ನಲ್ಲಿ ಉಳಿದುಕೊಂಡು ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದ್ದಾನೆ. ಆ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಪುಟ್ಟಮಾದಯ್ಯ ವಿವರಿಸಿದರು.

ADVERTISEMENT

ಡಿವೈಎಸ್‍ಪಿ ಬಿ.ಎಸ್.ತಳವಾರ, ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್, ಸಬ್‍ಇನ್‌ಸ್ಪೆಕ್ಟರ್ ಬಸವರಾಜ ಎಚ್, ಬಳಗಾನೂರು ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.