ಮಸ್ಕಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಮ್ ಬೋರ್ಡ್)ಯು, 263 ಕುಟುಂಬಗಳಿಗೆ ಮುಂಜೂರು ಮಾಡಿದ್ದ ಹಕ್ಕಪತ್ರಗಳನ್ನು ವಿತರಣೆ ಮಾಡದ ಕಾರಣ ಬಡ ಕುಟುಂಬಗಳು ಅತಂತ್ರ ಸ್ಥಿತಿಗೆ ಸಿಲುಕಿರುವ ಪ್ರಕರಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದ ಗಾಂಧಿನಗರದ 23 ನೇ ವಾರ್ಡ್‌ನ ಸರ್ವೆ ನಂ. 7/1 ಅನ್ನು ಸರ್ಕಾರ ಕೊಳಗೇರಿ ಪ್ರದೇಶ ಎಂದು ಘೋಷಣೆ ಮಾಡಿ 30-40 ವರ್ಷಗಳಿಂದ ವಾಸಿಸುತ್ತಿರುವ 263 ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಆಗಸ್ಟ್ 29ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಒಂದು ದಿನ ಮುಂಚೆಯೇ ಕಾರ್ಯಕ್ರಮ ರದ್ಧು ಮಾಡಿ ಫಲಾನುಭವಿಗಳಿಗೆ ಸ್ಲಮ್ ಬೋರ್ಡ್ ಶಾಕ್ ನೀಡಿದೆ.
ಸರ್ವೇ ನಂ. 7/1 ವಕ್ಪ್ ಆಸ್ತಿ ಇದ್ದು ಕಾರ್ಯಕ್ರಮ ರದ್ಧುಪಡಿಸುವಂತೆ ವಸತಿ ಸಚಿವರ ಮೌಖಿಕ ಸೂಚನೆ ಮೇರೆಗೆ ನಿಗದಿಯಾಗಿದ್ದ ಕಾರ್ಯಕ್ರಮ ರದ್ದು ಪಡಿಸಲಾಯಿತು ಎಂದು ಸ್ಲಮ್ ಬೋರ್ಡ್ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ₹1 ಸಾವಿರ ಹಾಗೂ ಸಾಮಾನ್ಯ ವರ್ಗದ ಕುಟುಂಬಕ್ಕೆ ₹2 ಸಾವಿರ ಬ್ಯಾಂಕ್ ಡಿಡಿಯನ್ನು ತೆಗೆಸಿಕೊಂಡಿದ್ದ 263 ಕುಟುಂಬಗಳು ತಮಗೆ ಮುಂಜೂರಾದ ಹಕ್ಕುಪತ್ರಕ್ಕಾಗಿ ಇಲಾಖೆಯಿಂದ ಇಲಾಖೆಗೆ ಚುನಾಯಿತಿ ಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆದಾಡುವಂತಾಗಿದೆ.
ಸರ್ವೆ ನಂ. 7/1 ರ ಪಹಣಿ ಪತ್ರ ಕಾಲಂ 9 ರಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಸ್ತಿ ಎಂದು 2023 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಆದೇಶಿಸಿದ ನಂತರವೇ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಲ್ಲಿ ವಾಸಿಸುವ 300 ಕುಟುಂಬಗಳ ಪೈಕಿ 263 ಕುಟುಂಬಗಳ ಪಟ್ಟಿ ಸಿದ್ದಪಡಿಸಿ ಹಕ್ಕು ಪತ್ರ ವಿತರಿಸಲು ಮುಂದಾಗಿತ್ತು.
ಗಾಂಧಿ ನಗರದ ಸರ್ವೇ ನಂ. 7/1 ರಲ್ಲಿ ವಾಸಿಸುವ 263 ಸೇರಿ ಒಟ್ಟು 306 ಬಡ ಕುಟುಂಬಗಳಿಗೆ ಸ್ಲಮ್ ಬೋರ್ಡ್ ಹಕ್ಕುಪತ್ರ ನೀಡಬೇಕು ಎಂದು ಸ್ಥಳೀಯ ನಿವಾಸಿ ಹುಸೇನಪ್ಪ ಬಿ. ವಿಭೂತಿ ಆಗ್ರಹಿಸಿದ್ದಾರೆ.
ಸಚಿವರೊಂದಿಗೆ ಚರ್ಚಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ಪಡೆದ ಎಲ್ಲಾ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದುಆರ್. ಬಸನಗೌಡ, ತುರುವಿಹಾಳ ಶಾಸಕರು
ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಸರ್ವೇ 7/1 ರ ಕಾನೂನು ತೊಡಕುಗಳನ್ನು ಸರಿಪಡಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಕೂಡಲೇ ಫಲಾನುಭವಿಗಳಿಗೆ ಸ್ಲಮ್ ಬೋರ್ಡ್ ಹಕ್ಕು ಪತ್ರ ನೀಡಲಿ.ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.