ADVERTISEMENT

ಐದು ವರ್ಷಗಳಲ್ಲಿ 3.33 ಲಕ್ಷ ಹೊಸ ಮತದಾರರು

ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುರಪುರ ಅತಿದೊಡ್ಡದು

ನಾಗರಾಜ ಚಿನಗುಂಡಿ
Published 30 ಏಪ್ರಿಲ್ 2019, 17:13 IST
Last Updated 30 ಏಪ್ರಿಲ್ 2019, 17:13 IST

ರಾಯಚೂರು: ಜಿಲ್ಲೆಯ ಐದು ಮತ್ತು ಯಾದಗಿರಿ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಹೊಂದಿರುವ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಶೇ 21 ರಷ್ಟು ಹೊಸ ಮತದಾರರ ಸಂಖ್ಯೆ ಏರಿಕೆಯಾಗಿದೆ.

2013 ರಲ್ಲಿ ನಡೆದ ವಿಧಾನಸಭೆ ಚುನಾವಣೆ ಬೆನ್ನಹಿಂದೆಯೇ 2014 ರಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಅಲ್ಲಿಂದ ಇವರೆಗೂ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು 53,281 ಮತದಾರರ ಸೇರ್ಪಡೆಯಾಗಿದೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರ ಎನ್ನುವ ಖ್ಯಾತಿಯೂ ಸುರಪುರಕ್ಕಿದೆ.

2,42,004 ಮತದಾರರನ್ನು ಹೊಂದಿರುವ ಲಿಂಗಸುಗೂರು ವಿಧಾನಸಭೆ ಕ್ಷೇತ್ರವು ಸಂಖ್ಯಾತ್ಮಕವಾಗಿ ಎರಡನೇ ಸ್ಥಾನದಲ್ಲಿದೆ. ಆದರೆ, 2014 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಧಾನಸಭೆ ಕ್ಷೇತ್ರಗಳ ಮತದಾರರ ಸಂಖ್ಯೆಯನ್ನು ಹೋಲಿಸಿದರೆ ಮಾನ್ವಿ ಕ್ಷೇತ್ರವು ಎರಡನೇ ಸ್ಥಾನದಲ್ಲಿತ್ತು. ಲಿಂಗಸುಗೂರಿನಲ್ಲಿ ಮಾನ್ವಿಗಿಂತಲೂ ಮತದಾರರ ಸಂಖ್ಯೆ ಏರಿಕೆ ಪ್ರಮಾಣ ಹೆಚ್ಚಳವಾಗಿರುವುದನ್ನು ಗಮನಿಸಬಹುದು.

ADVERTISEMENT

ರಾಯಚೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ 11,58,999 (ಶೇ 61) ಮತದಾರರು ಹಾಗೂ ಯಾದಗಿರಿ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ 7,34,577 (ಶೇ 39) ಮತದಾರರು ಇದ್ದಾರೆ. 2014 ರ ಲೋಕಸಭೆ ಚುನಾವಣೆ ವೇಳೆ ರಾಯಚೂರು ಜಿಲ್ಲೆಯಲ್ಲಿ 9,61,024 (ಶೇ 61) ಹಾಗೂ ಯಾದಗಿರಿ ಜಿಲ್ಲೆಯಲ್ಲಿ 5,98,944 (ಶೇ 39) ಮತದಾರರಿದ್ದರು. ಮತದಾರರ ಸಂಖ್ಯಾ ಅನುಪಾತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಗೆಲುವು ಸಾಧಿಸಿದ ಪಕ್ಷಗಳು ಬದಲಾವಣೆ ಆಗಿರುವುದು ಗಮನಾರ್ಹ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2008ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲೂ ಮತದಾರರ ಸಂಖ್ಯೆ ಐದು ವರ್ಷಗಳಲ್ಲಿ 35,647 (ಶೇ 18.21) ಏರಿಕೆಯಾಗಿದೆ. 2008ರಲ್ಲಿಯೇ ಅಸ್ತಿತ್ವ ಪಡೆದ ಮಸ್ಕಿ ವಿಧಾನಸಭೆ ಕ್ಷೇತ್ರವು ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆ ಆಗಿದೆ. ತಾಲ್ಲೂಕುವಾರು ಮತದಾರರ ಸಂಖ್ಯೆಯನ್ನು ಹೋಲಿಸಿದರೆ ಎರಡು ವಿಧಾಸಸಭೆ ಕ್ಷೇತ್ರಗಳಿರುವ ರಾಯಚೂರು ಮುಂಚೂಣಿಯಲ್ಲಿದೆ. ಲೋಕಸಭೆ ಕ್ಷೇತ್ರದ ಒಟ್ಟು 18,93,576 ಮತದಾರರ ಪೈಕಿ ಶೇ 24 ರಷ್ಟು (4,48,582 ಮತದಾರರು) ರಾಯಚೂರು ತಾಲ್ಲೂಕಿನಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.