ADVERTISEMENT

ಪಪ್ಪಾಯ ಬೆಳೆದು ₹ 4.5 ಲಕ್ಷ ಲಾಭ

ಬರಗಾಲದಲ್ಲೂ ಅಧಿಕ ಇಳುವರಿ, ಉತ್ತಮ ಧಾರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 5:52 IST
Last Updated 17 ಮಾರ್ಚ್ 2024, 5:52 IST
ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ರೈತ ಅಖಂಡೇಶ್ವರ ಪಪ್ಪಾಯ ಬೆಳೆದಿರುವುದು
ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ರೈತ ಅಖಂಡೇಶ್ವರ ಪಪ್ಪಾಯ ಬೆಳೆದಿರುವುದು   

ಕವಿತಾಳ: ಆನಂದಗಲ್‌ ಗ್ರಾಮದ ರೈತ ಅಖಂಡೇಶ್ವರ ಅವರು ಹರ್ವಾಪುರ ಗ್ರಾಮದಲ್ಲಿನ 4 ಎಕರೆ 20 ಗುಂಟೆ ಸ್ವಂತ ಜಮೀನಿನಲ್ಲಿ ಪಪ್ಪಾಯ ಬೆಳೆದು ಲಾಭ ಪಡೆದಿದ್ದಾರೆ.

ಈ ವರ್ಷ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಛಲ ಬಿಡದ ಅವರು ಪಕ್ಕದ ಜಮೀನಿನಿಂದ ಕೊಳವೆಬಾವಿ ಲೀಜ್‌ ಪಡೆದು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಎರಡೂವರೆ ತಿಂಗಳಿಂದ ಇಳುವರಿ ಆರಂಭವಾಗಿದ್ದು ಇದುವರೆಗೂ ಅಂದಾಜು 130 ಟನ್‌ ಬೆಳೆಯನ್ನು ಪ್ರತಿ ಕೆ.ಜಿಗೆ ₹4 ರಿಂದ ₹16 ವರೆಗೆ ಮಾರಾಟ ಮಾಡಿದ್ದಾರೆ. ಇನ್ನೂ 150 ಟನ್‌ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ದಾಳಿಂಬೆ ಮತ್ತು ಪಪ್ಪಾಯ ನಾಟಿ ಮಾಡಿದ್ದು ಹನಿ ನೀರಾವರಿ ಪದ್ಧತಿ ಅಳವಡಿಕೆ, ರಸಗೊಬ್ಬರ, ಕುರಿ ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರು ಸೇರಿದಂತೆ ಒಂದು ಎಕರೆಗೆ ಅಂದಾಜು ₹ 1 ಲಕ್ಷ ವೆಚ್ಚ ತಗುಲಿದೆ.

ADVERTISEMENT

ತೋಟಗಾರಿಕೆ ಇಲಾಖೆಯ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದಿದ್ದು 40 ಕೂಲಿ ಕಾರ್ಮಿಕರಿಗೆ 14 ದಿನಗಳ ಅವಧಿಗೆ ಕೆಲಸ ನೀಡಿ 560 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.

’ಪಂದರಾ ನಂಬರ್‌ (15) ತಳಿ ಪಪ್ಪಾಯ ನಾಟಿ ಮಾಡಿದ್ದೆ. ಅದು ರೋಗ ರಹಿತ ತಳಿ. ಹೀಗಾಗಿ ನಿರ್ವಹಣೆ ಖರ್ಚು ಕಡಿಮೆ. ಈ ವರ್ಷ ಮಳೆ ಕೊರತೆಯಿಂದ ಎರಡು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿತು. ಅನಿವಾರ್ಯವಾಗಿ ವರ್ಷಕ್ಕೆ ₹ 12 ಸಾವಿರದಂತೆ ಪಕ್ಕದ ಜಮೀನಿನಲ್ಲಿನ ಕೊಳವೆಬಾವಿಯನ್ನು ಲೀಜ್‌ ಪಡೆದಿದ್ದೇನೆ. ಒಂದು ವರ್ಷದ ಕೊಳವೆಬಾವಿಯ ಬಾಡಿಗೆ, ಪೈಪ್‌ ಲೈನ್‌ ಅಳವಡಿಕೆ ಸೇರಿ ಇದುವರೆಗೂ ಅಂದಾಜ ₹7 ಲಕ್ಷ ಖರ್ಚು ಮಾಡಿದ್ದೇನೆ. ₹ 11.50 ಲಕ್ಷದ ಬೆಳೆ ಕೈಸೇರಿ ಖರ್ಚು ತೆಗೆದು ₹ 4.5 ಲಕ್ಷ ಲಾಭ ಪಡೆದಿದ್ದೇನೆ. ಈಗ ಮುಂದೆ ಬರುವ ಇಳುವರಿ ಸಂಪೂರ್ಣ ಲಾಭದಾಯಕʼ ಎಂದು ರೈತ ಅಖಂಡೇಶ್ವರ ಹೇಳಿದರು.

’ಮಳೆ ಕೊರತೆಯಿಂದ ಬರಗಾಲ ನಿರ್ಮಾಣವಾಗಿದೆ. ಈ ಸಂದರ್ಭದಲ್ಲೂ ಉತ್ತಮ ಬೆಳೆ ಬೆಳೆಯುವ ಮೂಲಕ ಅಖಂಡೇಶ್ವರ ಇತರ ರೈತರಿಗೆ ಮಾದರಿಯಾಗಿದ್ದಾರೆʼ.

ಕರಿಬಸವ ಆನಂದಗಲ್‌, ರೈತ

ಪಾಮನಕಲ್ಲೂರು ಭಾಗದಲ್ಲಿ ಈ ವರ್ಷ ರೈತರು ಅತಿ ಹೆಚ್ಚು ಪಪ್ಪಾಯ ಬೆಳೆದಿದ್ದಾರೆ. ಮಳೆ ಕೊರತೆ ನಡುವೆಯೂ ಉತ್ತಮ ಇಳುವರಿ ಬಂದಿದೆ. ರೈತರು ಇಲಾಖೆ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ

ಚಂದ್ರಶೇಖರ ಕುರಿ, ಸಹಾಯಕ ನಿರ್ದೆಶಕ ತೋಟಗಾರಿಕೆ ಇಲಾಖೆ ಮಾನ್ವಿ

ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ರೈತ ಅಖಂಡೇಶ್ವರ ಪಪ್ಪಾಯ ಬೆಳೆದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.