ರಾಯಚೂರು: ಹಿಂದುಳಿದ ಪ್ರದೇಶ ಅಪಖ್ಯಾತಿಯ ರಾಯಚೂರು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವವರ ಪ್ರಮಾಣದಲ್ಲೂ ಹಿಂದೆ ಬಿದ್ದಿರುವುದು ಗಮನಾರ್ಹ.
1962 ರಲ್ಲಿ ನಡೆದ ಮೂರನೇ ಲೋಕಸಭೆ ಚುನಾವಣೆಗೆ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಶೇ 62.71 ಮತದಾನವಾಗಿತ್ತು. ಇವರೆಗೂ ಇದೇ ಮತದಾನ ಪ್ರಮಾಣ ಗರಿಷ್ಠ ಎನ್ನುವ ದಾಖಲೆ ಉಳಿದಿದೆ. 1989 ರಲ್ಲಿ ನಡೆದ 9ನೇ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ 1999 ರಲ್ಲಿ ನಡೆದಿದ್ದ 13ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣವು ಶೇ 60 ರ ಗಡಿ ದಾಟಿದ್ದರೂ ಹಿಂದಿನ ದಾಖಲೆ ಅಳಿಸಲು ಸಾಧ್ಯವಾಗಿಲ್ಲ.
ಮತದಾರರ ಪ್ರಮಾಣವು 1971 ರಿಂದ ನಿರಂತರ ಏರಿಕೆಯಾಗಿದೆ. ಆದರೆ, ಮತದಾನ ಮಾಡುವವರ ಪ್ರತಿಶತ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಮತದಾನ ಹೆಚ್ಚಳ ಮಾಡುವುದಕ್ಕಾಗಿ ಚುನಾವಣಾ ಆಯೋಗವು ನಿರಂತರವಾಗಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಂಘ– ಸಂಸ್ಥೆಗಳು ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಮೂಲಕ ಅಭಿಯಾನಗಳನ್ನು ಮಾಡಿಸಿ, ಪ್ರತಿಜ್ಞೆಗಳನ್ನು ಬೋಧಿಸಲಾಗುತ್ತಿದೆ.
ತೀರಾ ಕನಿಷ್ಠ ಮತದಾನ ಪ್ರಮಾಣವು 1991 ರಲ್ಲಿ ನಡೆದಿದ್ದ ಹತ್ತನೇ ಲೋಕಸಭೆ ಚುನಾವಣೆಯಲ್ಲಿ ಆಗಿತ್ತು. 10,42,161 ಮತದಾರರ ಪೈಕಿ ಕೇವಲ ಶೇ 40.93 ಮತದಾರರು ಮತದಾನ ಮಾಡಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ಲೋಕಸಭೆ ಕ್ಷೇತ್ರಗಳಾದ ಕಲಬುರ್ಗಿ, ಬಳ್ಳಾರಿ, ಕೊಪ್ಪಳಕ್ಕೆ ಹೋಲಿಕೆ ಮಾಡಿದಾಗ ಕಲಬುರ್ಗಿಗಿಂತಲೂ ರಾಯಚೂರು ಕ್ಷೇತ್ರದ ಮತದಾನ ಪ್ರಮಾಣ ಹೆಚ್ಚಳವಿದೆ. ಕಲಬುರ್ಗಿ ಲೋಕಸಭೆ ಕ್ಷೇತ್ರದಲ್ಲಿ 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 61.57 ಮತದಾನ ಆಗಿರುವುದು ಸರ್ವಕಾಲಿನ ದಾಖಲೆಯಾಗಿ ಉಳಿದಿದೆ.
ಹೈದರಾಬಾದ್ ಕರ್ನಾಟಕ ಭಾಗದ ಲೋಕಸಭೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಅತಿಹೆಚ್ಚು ಮತದಾನ ಪ್ರಮಾಣವು ದಾಖಲಾಗಿರುವುದು ಬಳ್ಳಾರಿ ಕ್ಷೇತ್ರದಲ್ಲಿ. 2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ 70.49 ರಷ್ಟು ಮತದಾನವಾಗಿದೆ. ಮೊದಲ ಲೋಕಸಭೆ ಚುನಾವಣೆಯಿಂದಲೂ ಬಳ್ಳಾರಿ ಮುಂಚೂಣಿ ಕಾಯ್ದುಕೊಂಡಿರುವುದು ವಿಶೇಷ. ಎರಡನೇ ಸ್ಥಾನದಲ್ಲಿರುವ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ 2014 ರಲ್ಲಿ ನಡೆದಿದ್ದ 16ನೇ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 65.63 ರಷ್ಟು ಮತದಾನ ಆಗಿರುವುದು ದಾಖಲೆ.
ರಾಯಚೂರು ಲೋಕಸಭೆ ಕ್ಷೇತ್ರದ ಮತದಾನವಾದ ವಿವರ
ವರ್ಷ | ಮತದಾನ (ಶೇ) |
1952 | 50.83 |
1957 | 36.96 |
1962 | 62.71 |
1967 | 49.59 |
1971 | 50.20 |
1977 | 51.28 |
1980 | 46.06 |
1984 | 54.06 |
1989 | 61.57 |
1991 | 40.93 |
1996 | 48.21 |
1998 | 59.00 |
1999 | 60.42 |
2004 | 50.27 |
2009 | 45.90 |
2014 | 58.32 |
(ಆಧಾರ: ಕೇಂದ್ರ ಚುನಾವಣಾ ಆಯೋಗ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.