ರಾಯಚೂರು: ಇಲ್ಲಿನ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ಮುರ‍್ರಾತಳಿ ಕೋಣವು ರೈತರ ಗಮನ ಸೆಳೆಯುತ್ತಿದೆ.
ಅಜಾನುಬಾಹು ಕೋಣದ ದರ ಕೇಳಿ ಎಲ್ಲರೂ ಬಾಯಿ ತೆರೆದು ನಿಲ್ಲುವಂತಾಗಿದೆ. ಮೂರು ವರ್ಷದ ಈ ಕೋಣದ ದರ ಬರೋಬ್ಬರಿ ₹9 ಲಕ್ಷ. ಕಲ್ಯಾಣ ಕರ್ನಾಟಕ ಭಾಗದ ರೈತರು ಈ ಕೋಣ ನೋಡಿ ಖುಷಿ ಪಡುವುದರ ಜೊತೆ ಅಚ್ಚರಿ ಪಡುತ್ತಿದ್ದಾರೆ.
ಕೋಣದ ಬಗ್ಗೆ ಮಾಹಿತಿ ಪಡೆದು, ಅದರೊಂದಿಗೆ ಛಾಯಾಚಿತ್ರ ಸೆರೆಹಿಡಿಯುವುದು ಸಾಮಾನ್ಯವಾಗಿದೆ. ಹೆಚ್ಚು ಹಾಲು ನೀಡುವ ಸಾಮರ್ಥ್ಯ ಹೊಂದಿರುವ ಮುರ‍್ರಾತಳಿ ಎಮ್ಮೆ ಮತ್ತು ಹೈನುಗಾರಿಕೆಗೆ ನೆರವಾಗುವ ಮುರ‍್ರಾ ಕೋಣವನ್ನು ರೈತರಿಗೆ ಪರಿಚಯಿಸುವುದಕ್ಕಾಗಿ ಶ್ರೀನಿವಾಸರೆಡ್ಡಿ ಅವರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಕರೆಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪದ ರೈತ ಶ್ರೀನಿವಾಸರೆಡ್ಡಿ ಅವರಿಗೆ ಈ ವರ್ಷ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೀಡಿದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ಅವರು ಮುರ‍್ರಾತಳಿ ಎಮ್ಮೆಗಳನ್ನು ಮಾತ್ರ ಸಾಕಾಣಿಕೆ ಮಾಡಿದ್ದು, ಪ್ರತಿದಿನ 400 ಲೀಟರ್ ಹಾಲು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ 200 ಲೀಟರ್ ಮಾರಾಟ ಮಾಡಿ, ಇನ್ನುಳಿದ ಹಾಲುಗಳನ್ನು ಕರುಗಳು ಕುಡಿಯುವುದಕ್ಕೆ ಬಿಡುತ್ತಿದ್ದಾರೆ.
‘ಸಾಮಾನ್ಯ ದನಕರುಗಳಿಗೆ ನೀಡುವ ಮೇವನ್ನೆ ಈ ಕೋಣಕ್ಕೂ ನೀಡುತ್ತಿದ್ದೇವೆ. ಆದರೆ ವರ್ಷದಲ್ಲಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಮಾತ್ರ ಪ್ರತಿದಿನ 10 ಲೀಟರ್ ಹಾಲು ಮತ್ತು ಹಸಿಮೊಟ್ಟೆಗಳನ್ನು ಸೇವಿಸುವುದಕ್ಕೆ ಕೋಣಕ್ಕೆ ನೀಡುತ್ತೇವೆ’ ಎನ್ನುವುದು ಶ್ರೀನಿವಾಸರೆಡ್ಡಿ ಅವರ ವಿವರಣೆ.
‘ಮೂರು ತಿಂಗಳು ಮುರ‍್ರಾ ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸುವ ಅವಧಿ. ಹೀಗಾಗಿ ಗುಣಮಟ್ಟದ ವಿರ್ಯ ಉತ್ಪಾದನೆಯಾಗುವ ಉದ್ದೇಶದಿಂದ ಹಾಲು, ಮೊಟ್ಟೆ ಕೊಡುತ್ತಿದ್ದೇವೆ. ಈ ವರ್ಷದಿಂದ ಗರ್ಭಧಾರಣೆ ಮಾಡುವ ಶಕ್ತಿ ಕೋಣಕ್ಕೆ ಬಂದಿದೆ. ಮುಂದಿನ 10 ವರ್ಷಗಳವರೆಗೂ ಇದಕ್ಕೆ ಗರ್ಭಧಾರಣೆ ಮಾಡಿಸುವ ಶಕ್ತಿ ಇರುತ್ತದೆ. ಸುಮಾರು 200 ಕ್ಕೂ ಹೆಚ್ಚು ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸಬಹುದು’ ಎಂದು ತಿಳಿಸಿದರು.
ಜನವರಿ 10 ರಿಂದ ಆರಂಭವಾದ ರಾಯಚೂರು ಕೃಷಿಮೇಳವು ಗುರುವಾರ ಸಮಾರೋಪವಾಗಿದೆ. ಮುರ‍್ರಾಕೋಣ ನೋಡಲು ಆಸಕ್ತಿ ಇದ್ದವರು ಸಿರಗುಪ್ಪದ ಕೃಷಿ ಇಲಾಖೆಯವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.