ಹಟ್ಟಿಚಿನ್ನದಗಣಿ: ಸಮೀಪದ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಗಿಡದದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರಿನ ಹೊದಿಕೆಯಿಂದ ಕಂಗೊಳಿಸುತ್ತಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯಾಗಿದೆ.
2001ರಲ್ಲಿ 1ರಿಂದ 5ನೇ ತರಗತಿಯವರಗೆ ಶಾಲೆ ಪ್ರಾರಂಭವಾಗಿದ್ದು, ಒಟ್ಟು 52 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪುಟ್ಟ ಶಾಲೆಯು ಚಿಕ್ಕ ಮಕ್ಕಳ ಮನಸ್ಸಲ್ಲಿ ಗಿಡ, ಮರ, ನೆಲ, ಜಲ, ಸಂರಕ್ಷಣೆ ಭದ್ರ ಬುನಾದಿಯನ್ನು ಹಾಕುತ್ತಿದೆ. ಶಾಲೆ, ಕಾಂಪೌಂಡ್ ಆವರಣದಲ್ಲಿ ಗಿಡಗಳನ್ನು ಇಲ್ಲಿನ ಶಿಕ್ಷಕ ಚಂದ್ರು ಸ್ವಂತ ಖರ್ಚಿನಲ್ಲಿ ಬೆಳೆಸಿದ್ದಾರೆ ಎನ್ನುತ್ತಾರೆ ಗ್ರಾಮಸ್ಧರು.
ನೀರಿನ ಕಾರಂಜಿ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ. ಬದಾಮಿ, ತೆಂಗು, ಕರಿಬೇವು, ಹೆಬ್ಬೇವು, ಆಕಾಶ ಹೊಂಗೆ, ದಾಸವಾಳ, ಬಟ್ಟಲ ಹೂವು, ಕನಕಾಂಬರ, ಸಾಗುವಾನಿ, ನುಗ್ಗೆ, ಮಲ್ಲಿಗೆ ಸೇರಿದಂತೆ ವಿವಿಧ ತಳಿಯ 80ಕ್ಕೂ ಹೆಚ್ಚು ಗಿಡಗಳು ಶಾಲೆ ಆವರಣದಲ್ಲಿ ನಳನಳಿಸುತ್ತಿವೆ. ಶಾಲೆಯ ಎದುರು ನಿಂತು ನೋಡಿದರೆ ಕಟ್ಟಡ ಕಾಣುವುದಿಲ್ಲ. ಬದಲಾಗಿ ಗಿಡ– ಮರಗಳೇ ಕಾಣಿಸುತ್ತವೆ ಎನ್ನುತ್ತಾರೆ ಪಾಲಕರು.
ಪ್ರತಿದಿನ ಶಾಲೆಗೆ ಬರುವ ಮಕ್ಕಳು ಗಿಡಗಳಿಗೆ ನೀರು ಹಾಕುತ್ತಾರೆ. ಅವರ ಕಲಿಕೆಗೆ ಅನುಕೂಲವಾಗಲು ತರಗತಿಗಳನ್ನು ಆಗಾಗ ಗಿಡದ ನೆರಳಿನ ಕೆಳಗೆ ನಡೆಸಲಾಗುತ್ತದೆ. ಶಾಲೆಯ ಆವರಣದಲ್ಲಿ ಬೆಳೆಯಲಾದ ಹಣ್ಣುಗಳನ್ನು ಮಕ್ಕಳಿಗೆ ತಿನ್ನಲು ಕೊಡಲಾಗುತ್ತದೆ. ಇದೇ ವೇಳೆ ಅದರ ಮಹತ್ವದ ಬಗ್ಗೆಯೂ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ಪಾಲಕರು ಹರ್ಷ ವ್ಯಕ್ತಪಡಿಸುತ್ತಾರೆ.
‘ಆರಂಭದಲ್ಲಿ 15 ಗಿಡಗಳಿದ್ದವು. 19 ವರ್ಷದ ಸೇವಾ ಅವಧಿಯಲ್ಲಿ ಶಾಲೆಯ ಆವರಣದಲ್ಲಿ ದೊಡ್ಡದಾದ ಉದ್ಯಾನ, ಕಾರಂಜಿ ನಿರ್ಮಾಣವಾಗಿರುವುದು ಸಂತಸ ತಂದಿದೆ. ನಮ್ಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಅಭಿನಂದಿಸಿದ್ದಾರೆ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಲೆನಾಡಿನ ಶಾಲೆಗಳಂತೆ ನಮ್ಮ ಶಾಲೆಯು ಹಸಿರು ಹೊಂದಿರುವುದಕ್ಕೆ ಮಕ್ಕಳ ಪರಿಸರ ಪ್ರೀತಿಯೇ ಕಾರಣ. ಇದು ಇಲ್ಲಿನ ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಚಂದ್ರು ಕಬ್ಬಲಗೇರಿ.
Quote - ಓರ್ವ ಶಿಕ್ಷಕರ ಪ್ರಯತ್ನದಿಂದ ಸರ್ಕಾರಿ ಶಾಲೆಯ ಆವರಣ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಇತರ ಶಾಲೆಗಳಿಗೆ ಮಾದರಿಯಾಗಿದೆ. ದುರುಗಪ್ಪ ಎಸ್‌ಡಿಎಂಸಿ ಅಧ್ಯಕ್ಷ
Quote - ಪರಿಸರ ರಕ್ಷಣೆಯಿಂದಲೇ ಜೀವಸಂಕುಲ ಉಳಿವು ಸಾಧ್ಯ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದರ ಜೊತೆಗೆ ಅದರ ರಕ್ಷಣೆ ಮಾಡುವುದೇ ನಮ್ಮ ಧ್ಯೆಯ. ಚಂದ್ರು ಕಬ್ಬಲಗೇರಿ ಮುಖ್ಯಶಿಕ್ಷಕ ಬಾರಿಗಿಡದದೊಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.