ADVERTISEMENT

ಖಾಸಗಿ ಕಾಲೇಜು ಹಾವಳಿಗೆ ನಲುಗಿದ ಸರ್ಕಾರಿ ಕಾಲೇಜು

ಅನಧಿಕೃತ ಗೈರು: ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು?

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:19 IST
Last Updated 20 ಜೂನ್ 2024, 7:19 IST
ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡದ ಹೊರ ನೋಟ
ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡದ ಹೊರ ನೋಟ   

ಲಿಂಗಸುಗೂರು: ಐದು ದಶಕಗಳ ಹಿಂದೆ 1972–73ರಲ್ಲಿ ಆರಂಭಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾವಿರ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಹೊಂದಿದ್ದು ಐತಿಹ್ಯ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಕಾಲೇಜುಗಳ ಆರಂಭ, ಸರ್ಕಾರದ ನಿರ್ಲಕ್ಷ್ಯದಿಂದ ಉಪನ್ಯಾಸಕರು, ಸಿಬ್ಬಂದಿ, ಅಗತ್ಯ ಸೌಲಭ್ಯಗಳಿಲ್ಲದೆ ನಲಗುತ್ತಿರುವುದು ವಿಪರ್ಯಾಸ.

ನಾಲ್ಕು ದಶಕಗಳ ಹಿಂದೆ ಇದೇ ಕಾಲೇಜಿನಲ್ಲಿ ಕಲಿತವರು ರಾಜ್ಯ, ದೇಶದ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹೆಸರು ಮಾಡಿದ್ದಾರೆ. ಐವತ್ತು ವರ್ಷಗಳ ಹಿಂದೆಯೇ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗ ಹೊಂದಿದ ಕೀರ್ತಿ ಸ್ಥಳೀಯ ಸರ್ಕಾರಿ ಕಾಲೇಜಿಗೆ ಸಲ್ಲುತ್ತದೆ. ಅನುಭವಿ ಉಪನ್ಯಾಸಕರು, ಸುಸಜ್ಜಿತ ಪ್ರಯೋಗಾಲಯ, ಸಂಪದ್ಭರಿತ ಗ್ರಂಥಾಲಯ, ಸಿಬ್ಬಂದಿ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಹೊಂದಿತ್ತು.

ಆರು ಎಕರೆ ವಿಶಾಲ ಪ್ರದೇಶದಲ್ಲಿ ಮನಸೋ ಇಚ್ಛೆ ಕೊಠಡಿಗಳನ್ನು ಕಟ್ಟಿಸಲು ಮುಂದಾಗಿರುವ ಚುನಾಯಿತ ಪ್ರತಿನಿಧಿಗಳು ಅಗತ್ಯ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿಲ್ಲ. ಕಳೆದ ವರ್ಷ ಶಿಥಿಲಗೊಂಡಿದ್ದ ಹಳೆಯ ಕಾಲೇಜು ಕಟ್ಟಡ ನೆಲಸಮಗೊಂಡಿದೆ. ಸದ್ಯ 25 ಕೊಠಡಿಗಳಿದ್ದು ಬಳಕೆ ಮಾಡದೆ ಹೋಗಿದ್ದರಿಂದ 9 ಕೊಠಡಿಗಳು ಬಾಗಿಲು ಕಿಟಕಿ ಮುರಿದಿವೆ. 16 ಕೊಠಡಿಗಳು ಸುಸಜ್ಜಿತವಾಗಿದ್ದು ಬಳಕೆ ಮಾಡಲಾಗುತ್ತಿದೆ.

ADVERTISEMENT

ಪ್ರಾಚಾರ್ಯ ಹುದ್ದೆ ಸೇರಿ 16 ಉಪನ್ಯಾಸಕರು ಇರಬೇಕಾದಲ್ಲಿ ಕೇವಲ 9 ಉಪನ್ಯಾಸಕರಿದ್ದಾರೆ. ಪ್ರಾಚಾರ್ಯ ಸೇರಿ 6 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಜೀವಶಾಸ್ತ್ರ, ರಸಾಯನ ಶಾಸ್ತ್ರ, ಇಂಗ್ಲಿಷ್‌, ಅರ್ಥಶಾಸ್ತ್ರ, ಇತಿಹಾಸ ಬೋಧನೆ ಮಾಡುವ ಉಪನ್ಯಾಸಕರೇ ಇಲ್ಲ. ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿದೆ. ಬೋಧಕೇತರ ಸಿಬ್ಬಂದಿ ಇಲ್ಲದೆ ಹೋಗಿದ್ದರಿಂದ ಕಾಲೇಜು ಅವ್ಯವಸ್ಥೆಯ ಆಗರವಾಗಿದೆ.

ಮೂರು ವಿಭಾಗಗಳನ್ನು ಹೊಂದಿದ್ದ ಕಾಲೇಜಿಗೆ ಡಿ ದರ್ಜೆ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಒಂದು ಎಸ್‍ಡಿಎ ಹುದ್ದೆಗೆ ಬಂದಿದ್ದ ಸಿಬ್ಬಂದಿ ರಾಮಲಿಂಗಯ್ಯ 2019ರಿಂದ ಅನಧಿಕೃತ ಗೈರು ಆಗಿದ್ದಾರೆ. ಇಬ್ಬರು ಎಫ್‍ಡಿಎ ಪೈಕಿ ಒಬ್ಬರು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಜಿಲ್ಲಾ ಕಚೇರಿಗೆ ಒಂಬತ್ತು ವರ್ಷಗಳ ಹಿಂದೆ ಎರವಲು ಸೇವೆ ಮೇಲೆ ಹೋಗಿದ್ದಾರೆ. ಉಳಿದ ಇನ್ನೋರ್ವ ಸಿಬ್ಬಂದಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದಾರೆ.

ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಇಲ್ಲದಂತಾಗಿವೆ. ಕೊಳವೆಬಾವಿ ಅಂತರ್ಜಲಮಟ್ಟ ಕುಸಿತದಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮಕ್ಕಳಿಗೆ ಕುಳಿತುಕೊಳ‍್ಳಲು ಡೆಸ್ಕ್, ಕುರ್ಚಿ ಕೊರತೆ ಇದೆ. ಗ್ರಂಥಪಾಲಕ, ಪ್ರಯೋಗಾಲಯ ಸಹಾಯಕರಿಲ್ಲದೆ ಬಣಗುಟ್ಟುತ್ತಿವೆ. ಸೌಲಭ್ಯಗಳ ಅವ್ಯವಸ್ಥೆಗೆ ಚುನಾವಣಾ ಪ್ರಕ್ರಿಯೆಗೆ ಕಾಲೇಜು ಬಳಸಿಕೊಳ್ಳುವ ಪದ್ಧತಿಯೇ ಶಾಪವಾಗಿದೆ ಎಂಬುದು ಹೆಸರು ಹೇಳಲಿಚ್ಛಿಸದ ಉಪನ್ಯಾಸಕರ ಆರೋಪ.

ಕ್ರೀಡಾಕೂಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಂತರರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭೆಗಳು ಈ ಕಾಲೇಜಿಗೆ ಪ್ರವೇಶ ಪಡೆದಾಗ ಅವರಿಗೆ ದೈಹಿಕ ಶಿಕ್ಷಣದ ಉಪನ್ಯಾಸಕರು ಅಥವಾ ಮಾರ್ಗದರ್ಶಕರ ಕೊರತೆ ಕಾಡುತ್ತದೆ. ಕ್ರೀಡಾ ಶುಲ್ಕ ಪಡೆದುಕೊಳ್ಳುವ ಸರ್ಕಾರ ದೈಹಿಕ ಶಿಕ್ಷಣದ ಹುದ್ದೆಯನ್ನೇ ನೀಡಿಲ್ಲ.

ಇನ್ನು ಖಾಸಗಿ ಕಾಲೇಜು ಹಾವಳಿಯಿಂದ ಕಡಿಮೆ ಶೇ 50ಕ್ಕಿಂತ ಕಡಿಮೆ ಅಂಕ ಪಡೆದ ಮಕ್ಕಳೇ ಈ ಸರ್ಕಾರಿ ಕಾಲೇಜಿನ ಆಸ್ತಿಯಾಗಿದ್ದಾರೆ. 2022-23ರಲ್ಲಿ ಶೇ 73ರಷ್ಟು ಫಲಿತಾಂಶ ಹೊಂದಿದ್ದ ಕಾಲೇಜು 2023-24ರಲ್ಲಿ ಶೇ 83ರಷ್ಟು ಸಾಧನೆ ಮೆರೆದಿದೆ. ಸಾವಿರ ಸಂಖ್ಯೆಯಲ್ಲಿರುತ್ತಿದ್ದ ಮಕ್ಕಳ ಸಂಖ್ಯೆ ಮಾತ್ರ ಪ್ರಸಕ್ತ ವರ್ಷ 327ಕ್ಕೆ ಕುಸಿದಿದೆ. ಅಗತ್ಯ ಸೌಲಭ್ಯಗಳ ಕೊರತೆ, ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ, ಪ್ರಯೋಗಾಲಯ ಬಳಕೆ ಕ್ಷೀಣಿಸಿದ್ದರಿಂದ ಮಕ್ಕಳ ದಾಖಲಾತಿ ಪ್ರಮಾಣ ದಿಢೀರ್ ಕುಸಿತಗೊಂಡಿದೆ. ಇರುವಷ್ಟರಲ್ಲಿ ಕಾಲೇಜು ನಡೆಸುವ ಅನಿವಾರ್ಯತೆ ಎದುರಾಗಿದೆ.

ಪ್ರಭಾರ ಪ್ರಾಚಾರ್ಯ ಮರುಘೇಂದ್ರಪ್ಪ ಮಾತನಾಡಿ, ‘ಉಪನ್ಯಾಸಕರು, ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯಗಳ ಕೊರತೆ ಮಧ್ಯೆ ಕಾಲೇಜು ಮುಂದುವರಿಸಿಕೊಂಡು ಬಂದಿದ್ದೇವೆ. ಸರ್ಕಾರದ ನೀತಿ ನಿಯಮಗಳಡಿ ನೋಂದಣಿ ಮಾಡಿಕೊಂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಕಡಿಮೆ ಬಂದಿದ್ದರಿಂದ ಮಕ್ಕಳ ನೋಂದಣಿ ಕ್ಷೀಣಿಸಿದೆ. ಹೆಚ್ಚುವರಿ ಸೌಲಭ್ಯಕ್ಕೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಎಸ್‍ಡಿಎ ಅನಧಿಕೃತ ಗೈರು

ಲಿಂಗಸುಗೂರು: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ರಾಮಲಿಂಗಯ್ಯ (ಸಿಸಿಟಿ) 2019ರಿಂದ ಅನಧಿಕೃತವಾಗಿ ಗೈರು ಆಗಿದ್ದಾರೆ. ಈ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯ.

2019ರ ಫೆಬ್ರುವರಿ ತಿಂಗಳು ಪ್ರಾಚಾರ್ಯರು ಅಥವಾ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರದೆ, ಅನಧಿಕೃತ ಗೈರಾಗಿರುವ ರಾಮಲಿಂಗಯ್ಯಗೆ ಈಗಾಗಲೇ ಮೂರು ಹಂತದ ನೋಟಿಸ್‍ ನೀಡಲಾಗಿದೆ. ಇಂದಿಗೂ ಅವರು ಎಲ್ಲಿದ್ದಾರೆಂಬುದು ಸ್ಪಷ್ಟ ಮಾಹಿತಿ ಕಾಲೇಜಿಗೆ ಗೊತ್ತಿಲ್ಲ.

1993ರಲ್ಲಿ ರಾಯಚೂರು ಸಹಾಯಕ ಶಿಕ್ಷಣಾಧಿಕಾರಿ ಕಚೇರಿಗೆ ನೇಮಕಗೊಂಡಿದ್ದ. 2000 ಜೂನ್‌ನಿಂದ 2008ರ ಡಿಸೆಂಬರ್‌ವರೆಗೆ ಅನಧಿಕೃತ ಗೈರಾಗಿದ್ದ ರಾಮಲಿಂಗಯ್ಯ 2009ರ ಸೆಪ್ಟೆಂಬರ್‌ನಲ್ಲಿ ಇಲಾಖೆ ಬದಲಾವಣೆ ಮಾಡಿಸಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಗೆ ವರ್ಗಾವಣೆಗೊಂಡು ಬಂದಿದ್ದಾರೆ.

ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಬಳಕೆ ಮಾಡದೆ ಹೋಗಿದ್ದರಿಂದ ಶಿಥಿಲಗೊಂಡು ಅನಾಥ ಸ್ಥಿತಿಯಲ್ಲಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.