ಹಟ್ಟಿಚಿನ್ನದಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಅಲಸಂದಿ ಕ್ಷೇತ್ರ ಹೆಚ್ಚಳವಾಗಿದೆ. ಆದರೆ, ಹಸಿರು ಹುಳುವಿನ ಕಾಟ ಹೆಚ್ಚಾಗಿದ್ದು, ರೈತರು ಆತಂಕಗೊಂಡಿದ್ದಾರೆ.
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಹೆಸರು ಬೆಳೆ ಬೆಳೆಯುವುದು ಸಾಮಾನ್ಯ. ಆದರೆ ಈ ಬಾರಿ ಕೆಲವರು ಹೆಸರು ಬೆಳೆ ಬದಲಿಗೆ ಅಲಸಂದಿ ಬೆಳೆಯುತ್ತಿದ್ದಾರೆ.
‘ಅಲಸಂದಿಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುವುದು ಕಡಿಮೆ. ಬೆಳೆ ಕಟಾವು, ಒಕ್ಕಣೆ ಸುಲಭ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದ್ದರಿಂದ ರೈತರು ಅಲಸಂದಿ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಮುಂದಿನ ವರ್ಷ ಕ್ಷೇತ್ರ ವಿಸ್ತರಣೆ ಆಗುವ ಸಾಧ್ಯತೆ ಇದೆ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು.
ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹6,500, ₹5,000 ದವರೆಗೆ ಕನಿಷ್ಠ ಬೆಲೆ ಸಿಗುತ್ತಿದೆ ಎನ್ನುತ್ತಾರೆ ರೈತರು.
‘ಅಲಸಂದಿ ಬುಡ್ಡಿ ದೊಡ್ಡದಾಗಿರುತ್ತವೆ. ಕಟಾವು ಸಲೀಸು. ಇದು ಮುಂಗಾರು ಪೂರ್ವ ಬೆಳೆಯಾಗಿದೆ. ಈ ಬೆಳೆ ಮೂರು ತಿಂಗಳಲ್ಲಿ ಬರುತ್ತದೆ. ಹಿಂಗಾರು ಬೆಳೆಗೆ ಅವಕಾಶ ಸಿಗುತ್ತದೆ. ಜಾನುವಾರಗಳಿಗೂ ಹೊಟ್ಟು ಸಿಗಲಿದೆ’ ಎನ್ನುತ್ತಾರೆ ರೈತ ಯಂಕೋಬ ಪವಾಡೆ.
‘ಮಾರುಕಟ್ಟೆಯಲ್ಲಿ ಸುಧಾರಿತ ತಳಿಯ ಅಲಸಂದಿ ಬೀಜಗಳು ಲಭ್ಯವಿವೆ. ಭೂಮಿಗೆ ಹಸಿರೆಲೆ ಗೊಬ್ಬರ ಸಿಗಲಿದ್ದು, ಫಲವತ್ತತೆ ಹೆಚ್ಚಲಿದೆ’ ಎನ್ನುತ್ತಾರೆ ಕೃಷಿ ತಜ್ಞರು.
‘ಮೋಡ ಕವಿದ ವಾತಾವರಣದಿಂದ ಅಲಸಂದಿ ಬೆಳೆಗೆ ಹಸಿರು ಹುಳುವಿನ ಕಾಟ ಹೆಚ್ಚಾಗಿದೆ. ಔಷಧ ಸಿಂಪಡಣೆ ಮಾಡಿದರೂ ಅತೋಟಿಗೆ ಬರುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಬರಬೇಕು’ ಎನ್ನುತ್ತಾರೆ ಈ ಭಾಗದ ರೈತರು.
ಮಾರುಕಟ್ಟೆಯಲ್ಲಿ ಅಲಸಂದಿಗೆ ಉತ್ತಮ ಬೆಲೆ ಇದೆ. ಆದ್ದರಿಂದ ಈ ಬಾರಿ ಹೆಚ್ಚಿನ ರೈತರು ಅಲಸಂದಿ ಬೆಳೆ ಬೆಳೆದಿದ್ದಾರೆ. ಸಮಸ್ಯೆ ಇದ್ದರೆ ಕಚೇರಿಗೆ ಭೇಟಿ ನೀಡಿ ಬಗೆಹರಿಸಿಕೊಳ್ಳಬಹುದುಶಿವರಾಜ ಕೃಷಿ ಅಧಿಕಾರಿ ಗುರುಗುಂಟಾ
ರೈತರು ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ದ್ವಿದಳ ಧಾನ್ಯಗಳ ಮಾಹಿತಿ ಕೊರತೆ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕುಮುದುಕಪ್ಪ ಗುರಿಕಾರ, ಪೈದೊಡ್ಡಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.