ADVERTISEMENT

ಬಿಜೆಪಿ, ಆರ್‌ಎಸ್‌ಎಸ್‌ ನಾಯಕರಿಗೆ ರಾಜ್ಯದ ಮತದಾರರ ತಕ್ಕ ಉತ್ತರ: ಎ.ವಸಂತಕುಮಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:33 IST
Last Updated 24 ನವೆಂಬರ್ 2024, 14:33 IST
ವಸಂತಕುಮಾರ
ವಸಂತಕುಮಾರ   

ರಾಯಚೂರು: ‘ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳಲ್ಲಿ ಉಪ‌ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ಬಿಜೆಪಿ, ಆರ್‌ಎಸ್ಎಸ್ ನಾಯಕರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಹೇಳಿದರು.

‘ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಹಾಗೂ ಶಿಗ್ಗಾವಿಯಲ್ಲಿ ಯಾಸೀರ್‌ಅಹ್ಮದ್ ಖಾನ್ ಪಠಾಣ್ ಅವರನ್ನು ಮತದಾರರು ಹೆಚ್ಚಿನ ಅಂತರದಿಂದ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಸತೀಶ್ ಜಾರಕಿಹೊಳಿ, ಡಿ.ಕೆ‌.ಸುರೇಶ ಅವರ ಪರಿಶ್ರಮವೂ ಇದೆ’ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಾಗೂ ಇತರೆ ಸುಳ್ಳು ಹಗರಣಗಳ ಆರೋಪ ಮಾಡಿ ಜನರಲ್ಲಿ ಗೊಂದಲ ಮೂಡಿಸಿದ್ದರು. ಮತದಾರರು ಸರ್ಕಾರದ ಮೇಲೆ ಭರವಸೆ ಇಟ್ಟಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿ’ ಎಂದು ವಿಶ್ಲೇಷಿಸಿದರು.

‘ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ‌ಅಘಾಡಿ 40 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸಂಶಯವಿದೆ’ ಎಂದರು.

‘ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ವಿರೋಧ ಪಕ್ಷಗಳಿಗೆ ಮನ್ನಣೆ ನೀಡಬೇಕು. ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯಬೇಕು. ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಬ್ಯಾಲೇಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡಬೇಕು‌’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರಜಾಕ್ ಉಸ್ತಾದ್, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಮ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.