ADVERTISEMENT

ಲಿಂಗಸುಗೂರು | ಪ್ರವಾಹದಿಂದ ಬೆಳೆ ನಷ್ಟ: ಪರಿಹಾರಕ್ಕೆ ಕಚೇರಿಗೆ ಅಲೆದಾಟ

ಒಕ್ಕಲೆಬ್ಬಿಸುತ್ತಿರುವುದಕ್ಕೆ ಬೇಸತ್ತು ಗುಳೆ ಹೊರಟ ಕುಟುಂಬಸ್ಥರು

ಪ್ರಜಾವಾಣಿ ವಿಶೇಷ
Published 26 ಜುಲೈ 2024, 5:29 IST
Last Updated 26 ಜುಲೈ 2024, 5:29 IST
ಲಿಂಗಸುಗೂರು ತಾಲ್ಲೂಕು ಯರಗೋಡಿ ಬಳಿ ಕೃಷ್ಣಾ ಪ್ರವಾಹ ಸಂದರ್ಭ ತೆಪ್ಪದಲ್ಲಿ ದಾಟುವಾಗ ತೆಪ್ಪ ಮುಗುಚಿ ಮೃತರಾದ ಸುಭಾಶ್ಚಂದ್ರ ಪತ್ನಿ ಹನುಮವ್ವ ಕುಟುಂಬಸ್ಥರ ಇಂದಿನ ಸ್ಥಿತಿ
ಲಿಂಗಸುಗೂರು ತಾಲ್ಲೂಕು ಯರಗೋಡಿ ಬಳಿ ಕೃಷ್ಣಾ ಪ್ರವಾಹ ಸಂದರ್ಭ ತೆಪ್ಪದಲ್ಲಿ ದಾಟುವಾಗ ತೆಪ್ಪ ಮುಗುಚಿ ಮೃತರಾದ ಸುಭಾಶ್ಚಂದ್ರ ಪತ್ನಿ ಹನುಮವ್ವ ಕುಟುಂಬಸ್ಥರ ಇಂದಿನ ಸ್ಥಿತಿ   

ಲಿಂಗಸುಗೂರು: ನಾಲ್ಕು ದಶಕ ಅವಧಿಯಲ್ಲಿ ಪ್ರವಾಹದಿಂದ ಬೆಳೆಗಳ ನಷ್ಟ ಪರಿಹಾರ, ಮೇಕೆ, ಕುರಿ, ಜನತೆ ಕೊಚ್ಚಿ ಹೋಗಿರುವುದಕ್ಕೆ ಪರಿಹಾರ ನೀಡುವಂತೆ ಕಚೇರಿಗಳಿಗೆ ಭೀಕ್ಷುಕರಂತೆ ಅಲೆದು ಸುಸ್ತಾಗಿದ್ದೇವೆ. 17 ವರ್ಷಗಳ ಹಿಂದೆ ತೆಪ್ಪ ಮುಳುಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಿ ಮಾನವೀಯತೆ ಮೆರೆಯದ ಆಡಳಿತ ವೈಖರಿಗೆ ಸಂತ್ರಸ್ತರು ಬೇಸತ್ತಿದ್ದಾರೆ.

ಕೃಷ್ಣಾ ನದಿಯ ಕರಕಲಗಡ್ಡಿ ಸಂಬಂಧಿಗಳಿಗೆ 2007 ಆಗಸ್ಟ್‌ ಮೊದಲ ವಾರದಲ್ಲಿ ಪಡಿತರ ಸೇರಿದಂತೆ ಅಗತ್ಯ ವಸ್ತು ನೀಡಲು ತೆರಳಿದ್ದ ಸುಭಾಶ್ಚಂದ್ರ ಸೋಮಲಿಂಗಪ್ಪ (35) ಹಾಲಭಾವಿ ಮತ್ತು ಬಸಪ್ಪ ಅಮರಪ್ಪ (12) ಅಮ್ಮಾಪುರ ಅವರು ಮರಳಿ ಬರುವಾಗ ಅಲೆಗಳ ರಭಸಕ್ಕೆ ತೆಪ್ಪ ಮುಗುಚಿ ಮೃತರಾಗಿದ್ದರು. ಮೃತದೇಹ ಪತ್ತೆಗಾಗಿ ಅಲೆದಾಡಿ ಆಗಸ್ಟ್‌ 7 ರಂದು ಲಿಂಗಸುಗೂರು ಪೊಲೀಸ್‍ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು.

ಮೃತದೇಹ ಪತ್ತೆಗೆ ತಾಲ್ಲೂಕು ಮತ್ತು ಜಿಲ್ಲಾಡಳಿತ ಯಾವುದೇ ಸಹಕಾರ ನೀಡಲಿಲ್ಲ. ಮೃತರ ಕುಟುಂಬಕ್ಕೆ ಸೌಜನ್ಯತೆ ಆಧರಿಸಿ ಪರಿಹಾರ ನೀಡಲು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮನವಿ ಸಲ್ಲಿಸುತ್ತ ಬರಲಾಯಿತು. ಏಳು ವರ್ಷದ ನಂತರ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು.

ADVERTISEMENT

’ಮೃತರಿಗೆ ಸರ್ಕಾರದಿಂದ ಪರಿಹಾರ ಸಿಗಬಹುದು ಎಂದು ಭಿಕ್ಷುಕರಂತೆ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದೇವೆ. ಲಕ್ಷಾಂತರ ಹಣ ಖರ್ಚು ಮಾಡಿಕೊಂಡು ಸಾಲ ತೀರಿಸಲು ಮತ್ತು ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರು, ಮಂಗಳೂರಿಗೆ ಗುಳೆ ಹೋಗುತ್ತಿದ್ದೇವೆ. ಭರ್ಜರಿ ಕೃಷಿ ಚಟುವಟಿಕೆ ನಡೆಯುವಾಗ ತಾಲ್ಲೂಕು ಆಡಳಿತ ನಡುಗಡ್ಡೆಯಿಂದ ಎಲ್ಲರನ್ನು ಕರೆತಂದು ಕಾಳಜಿ ಕೇಂದ್ರದಲ್ಲಿ ಇರಿಸಿ ಒಕ್ಕಲೆಬ್ಬಿಸುತ್ತಿರುವುದು ಶಾಪವಾಗಿ ಪರಿಣಮಿಸಿದೆ’ ಎಂದು ದೂರುತ್ತಾರೆ.

’17 ವರ್ಷಗಳಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಲು ಇಲ್ಲದ ಕಾನೂನು ತೊಡಕು ಮುಂದಿಡುತ್ತ ಕಾಲಹರಣ ನಡೆಸಿದ ಅಧಿಕಾರಿಗಳು ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇನ್ನೊಂದಡೆ ನಡುಗಡ್ಡೆ ಪ್ರದೇಶಗಳ ರೈತರಿಗೆ ಪ್ರವಾಹದಿಂದ ನಷ್ಟಕ್ಕೊಳಗಾದ ಬೆಳೆ ಪರಿಹಾರ ನೀಡದೇ ದುರ್ಬಳಕೆ ಮಾಡಿಕೊಂಡು ತನಿಖೆ ನೆಪದಲ್ಲಿ ರೈತರಿಗೆ ಪಂಗನಾಮ ಹಾಕಿದ್ದಾರೆ’ ಎಂದು ಬಸಪ್ಪ ದಳಪತಿ ಆರೋಪಿಸಿದ್ದಾರೆ.

ವರ್ಷಕ್ಕೊಂದು ಭರವಸೆ ನೀಡುತ್ತ ಸಂತ್ರಸ್ತ ಕುಟುಂಬಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸುತ್ತ ಬರಲಾಗಿದೆ. ನೂರಕ್ಕೆ ನೂರರಷ್ಟು ಪರಿಶಿಷ್ಟ ಜಾತಿ, ಪಂಗಡ ಕುಟುಂಬಸ್ಥರೇ ಇಲ್ಲಿದ್ದಾರೆ. ಅವಿದ್ಯಾವಂತರು ಎಂಬ ಕಾರಣಕ್ಕೆ ಏನೂ ಸೌಲಭ್ಯ ನೀಡದೇ ಅಧಿಕಾರಿಗಳೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಇಲ್ಲಿ ಸಾಮಾನ್ಯವಾಗಿದೆ.

ಪತಿ ಮತ್ತು ಸಂಬಂಧಿಕರ ಕುಟುಂಬಕ್ಕೆ ಏಳು ವರ್ಷದ ನಂತರದಲ್ಲಿ ಮನೆ ಬಾಗಿಲಿಗೆ ಪರಿಹಾರ ನೀಡುವ ಭರವಸೆ ಹುಸಿಯಾಗಿದೆ. ಸಂಸದರು, ಶಾಸಕರು, ಸಚಿವರು, ಅಧಿಕಾರಿಗಳು ಸಾಂತ್ವನ ಹೇಳಿ ಭರವಸೆ ನೀಡಿದ್ದರು. ನಾವೂ ಕಚೇರಿಗಳಿಗೆ ಭೀಕ್ಷುಕರಂತೆ ಅಲೆದಾಡಿದೆವು. 17ವರ್ಷ ಕಾಲಹರಣ ಮಾಡಿದ್ದು ನೋವಾಗಿದೆ. ಪರಿಹಾರವೆ ಬೇಡವೆನ್ನಿಸಿದೆ’ ಎಂದು ಹನುಮವ್ವ ಸುಭಾಶ್ಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೆಳೆ ಪರಿಹಾರ ದುರ್ಬಳಕೆ ಹಾಗೂ ಸರಿಯಾಗಿ ತಲುಪದಿರುವ ಸಂಬಂಧ ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. 17 ವರ್ಷಗಳ ಹಿಂದೆ ಪ್ರವಾಹದಲ್ಲಿ ದಾಟುತ್ತಿದ್ದಾಗ ತೆಪ್ಪ ಮುಳುಗಿ ಕೊಚ್ಚಿಹೋಗಿರುವ ಮೃತ ಕುಟುಂಬಸ್ಥರು ಅಗತ್ಯ ದಾಖಲೆ ನೀಡಿದಲ್ಲಿ ತಕ್ಷಣವೇ ಪರಿಹಾರ ಮಂಜೂರು ಮಾಡಲಾಗುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್‌ ಶಂಶಾಲಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.