ರಾಯಚೂರು: ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರದಿಂದ ಆಯ್ಕೆ ಬಯಸಿ ದೇವದುರ್ಗ ತಾಲ್ಲೂಕಿನ ಸಂಕೇಶ್ವರಹಾಳದ ಯಲ್ಲಮ್ಮ ಬಸವರಾಜ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ಬಳಿ ₹ 5 ಲಕ್ಷ ಇದೆ.
ಎಂಟು ತಿಂಗಳ ಹಿಂದೆ ಅನಾರೋಗ್ಯದಿಂದಾಗಿ ಪತಿ ಮೃತಪಟ್ಟಿದ್ದಾರೆ. ಇವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಇಬ್ಬರ ಮದುವೆಯಾಗಿದೆ. ಇನ್ನಿಬ್ಬರು ಮನೆಯಲ್ಲಿದ್ದಾರೆ. ಒಬ್ಬ ಮಗ ಕಾನೂನು ಓದುತ್ತಿದ್ದಾರೆ. ಯಲ್ಲಮ್ಮ ಒಕ್ಕಲುತನ ಮಾಡಿ ಬದುಕು ಸಾಗಿಸುತ್ತಿದ್ದಾರೆ. ವಡವಟ್ಟಿಯಲ್ಲಿ ಪತಿ ಹೆಸರಲ್ಲಿದ್ದ 3.28 ಗುಂಟೆ ಕೃಷಿ ಜಮೀನು ಮಗ ಅಮರೇಶ ನಾಯಕ ಹೆಸರಿಗೆ ವರ್ಗಾವಣೆಯಾಗಿದೆ. ಸ್ವಂತ ಮನೆ ಹೊಂದಿರುವ ಯಲ್ಲಮ್ಮ ಅವರ ಬಳಿ ₹3.50 ಲಕ್ಷ ಮೌಲ್ಯದ ಐದು ತೊಲ ಚಿನ್ನ ಇದೆ. ಮಗನ ಹೆಸರಲ್ಲಿ ₹ 5 ಲಕ್ಷ ಇದೆ.
‘ಬಡವರ ಹಾಗೂ ಜನ ಸಾಮಾನ್ಯರ ಸ್ಥಿತಿ ಗಂಭೀರವಾಗಿದೆ. ಈಗಿನ ವ್ಯವಸ್ಥೆಯನ್ನು ನೋಡಿ ಬೇಸರಗೊಂಡಿರುವೆ. ಬಡವರಿಗೆ ನ್ಯಾಯ ದೊರಕಿಸಿಕೊಡಲು ಚುನಾವಣೆಗೆ ಸ್ಪರ್ಧಿಸಿರುವೆ’ ಎಂದು ಯಲ್ಲಮ್ಮ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.