ADVERTISEMENT

ರಾಯಚೂರು |ಪ್ರೀತಿಸಿದ ಯುವಕನ ಮನೆಯವರ ವಿರೋಧ: ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ

ಮದುವೆಗೆಯವಕನ ಕುಟುಂಬಸ್ಥರು ವಿರೋಧಿಸಿದ್ದರಿಂದ ಬೇಸರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:25 IST
Last Updated 23 ಜೂನ್ 2024, 16:25 IST
   

ರಾಯಚೂರು: ಪ್ರೀತಿಸಿದ ಯುವಕನ ಮನೆಯವರೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಭಾನುವಾರ ಇಲ್ಲಿಯ ದೇವರಕಾಲೊನಿಯ ಮಹಿಳಾ ಸಾತ್ವನ ಕೇಂದ್ರದ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅನುರಾಧಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಜಲಾಲನಗರದ ಅನುರಾಧಾ ಹಾಗೂ ವಿನಯ ರೆಡ್ಡಿ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅನುರಾಧಾ ಪರಿಶಿಷ್ಟ ಜಾತಿಗೆ ಸೇರಿದವರು ಎನ್ನುವ ಒಂದೇ ಕಾರಣಕ್ಕೆ ವಿನಯ ಕುಟುಂಬದವರು ಮದುವೆಗೆ ವಿರೋಧಿಸಿದ್ದರು. ಯುವತಿಯ ಕುಟುಂಬದವರು ಒಪ್ಪಿದರೂ ಯುವಕನ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನನೊಂದಿದ್ದ ಅನುರಾಧಾ, ನಗರದ ಮಾರ್ಕೆಟ್‌ ಯಾರ್ಡ್‌ ಪೊಲೀಸ್‌ ಠಾಣೆಗೆ ಬಂದು ದೂರು ಕೊಟ್ಟಿದ್ದಳು. ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಸಂಧಾನ ಮಾಡಿಸಲು ಯತ್ನಿಸಿದ್ದರು. ಪೊಲೀಸರಿಗೆ ದೂರು ಕೊಟ್ಟ ನಂತರ ಯುವತಿ ತಮ್ಮ ತಂದೆಯ ಮನೆಗೆ ಹೋಗಲು ನಿರಾಕರಿಸಿದ್ದಳು. ಹೀಗಾಗಿ ಪೊಲೀಸರು ಅನುರಾಧಾರನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದರು.

ADVERTISEMENT

ಪ್ರೀತಿಸಿದ ಯುವಕನೂ ಮದುವೆ ಮಾಡಿಕೊಳ್ಳಲಿಲ್ಲ. ನನ್ನ ತಂದೆ ತಾಯಿಗೂ ಅವಮಾನವಾಯಿತಲ್ಲ ಎಂದು ನೊಂದ ಯುವತಿ ಕಟ್ಟಡದ ಮೇಲಿಂದ ಹಾರಿದಳು. ಗಂಭೀರವಾಗಿ ಗಾಯಗೊಂಡಿದ್ದ ಅವಳನ್ನು ತಕ್ಷಣ ರಿಮ್ಸ್‌ಗೆ ಒಯ್ಯಲಾಯಿತಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಳು.

ವಿನಯ ರೆಡ್ಡಿ ಹಾಗೂ ಅವರ ಕುಟುಂಬದವರು ನನ್ನ ಮಗಳಿಗೆ ಮೋಸ ಮಾಡಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ಕುಟುಂಬದವರು ನಗರದ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.