ADVERTISEMENT

ತುರ್ವಿಹಾಳ: ಆರು ತಿಂಗಳಿಂದ ಮುಚ್ಚಿದ ಆಧಾರ್‌ ಕೇಂದ್ರ

ಸರ್ಕಾರಿ ಸೇವೆಗಳಿಗಾಗಿ ಸಾರ್ವಜನಿಕರ ಅಲೆದಾಟ

ಮಲ್ಲೇಶ ಬಡಿಗೇರ
Published 21 ಸೆಪ್ಟೆಂಬರ್ 2024, 5:55 IST
Last Updated 21 ಸೆಪ್ಟೆಂಬರ್ 2024, 5:55 IST
ತುರ್ವಿಹಾಳ ಪಟ್ಟಣದ ನಾಡಕಚೇರಿ
ತುರ್ವಿಹಾಳ ಪಟ್ಟಣದ ನಾಡಕಚೇರಿ   

ತುರ್ವಿಹಾಳ: ಸಿಂಧನೂರು ತಾಲ್ಲೂಕಿನ ದೊಡ್ಡ ಹೋಬಳಿಯಾದ ತುರ್ವಿಹಾಳದಲ್ಲಿ ಆರು ತಿಂಗಳಿಂದ ಆಧಾರ್‌ ಸೇವಾ ಕೇಂದ್ರ ಮುಚ್ಚಿದ್ದರಿಂದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜನರು ಮತ್ತು ವಿದ್ಯಾರ್ಥಿಗಳು ಹೊಸ ಆಧಾರ್ ಕಾರ್ಡ್ ಮತ್ತು ತಿದ್ದುಪಡಿಗಾಗಿ ನಿತ್ಯ ಪರದಾಡುತ್ತಿದ್ದಾರೆ.

ಪಟ್ಟಣದ ವ್ಯಾಪ್ತಿಗೆ ಗುಂಜಳ್ಳಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಬಸಣ್ಣ ಕ್ಯಾಂಪ್, ಮಧ್ಯಕ್ಯಾಂಪ್‌ಗಳಲ್ಲಿ ಒಟ್ಟು 20 ಸಾವಿರ ಜನರು ಸೇರಿದಂತೆ ಹೋಬಳಿ ವ್ಯಾಪ್ತಿಯ 20 ಹಳ್ಳಿಗಳಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಆದರೆ ಕಳೆದ 6 ತಿಂಗಳಿಂದ ಆಧಾರ್ ಸೇವಾ ಕೇಂದ್ರ ಮುಚ್ಚಿದ್ದರಿಂದ ಜನರು ಸರ್ಕಾರಿ ಸೇವೆ ಪಡೆಯಲು ಹಾಗೂ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗಿದೆ.

‘ಹೊಲದ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಆದರೆ ಕೆಲವರ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಹಾಗೂ ದೂರವಾಣಿ ಸಂಖ್ಯೆ ಸೇರಿಸಲು ತೊಂದರೆಯಾಗಿದೆ’ ಎಂದು ರೈತ ಶಿವಪುತ್ರಪ್ಪ ಕೆಂಗೇರಿ ದೂರಿದರು.

ADVERTISEMENT

‘ಶಾಲೆ ದಾಖಲಾತಿ, ವಿದ್ಯಾರ್ಥಿ ವೇತನ ಸೇರಿದಂತೆ ರೈತರು ಪ್ರತಿಯೊಂದು ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಮತ್ತು ಸರ್ಕಾರಿ ನೌಕರಿಗೆ ಅರ್ಜಿ ಹಾಕಲು ಹಾಗೂ ಬ್ಯಾಂಕ್ ಇತರೆ ಸೌಲಭ್ಯಕ್ಕಾಗಿ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಕೆಲವು ಮಕ್ಕಳ ಜನನ ಪ್ರಮಾಣಪತ್ರಕ್ಕೂ ಮತ್ತು ಮಗುವಿನ ಹೆಸರಿಗೂ ವ್ಯತ್ಯಾಸವಿದೆ. ಹೀಗಾಗಿ ಆಧಾರ್ ತಿದ್ದುಪಡಿಯಾಗಬೇಕು. ಪಟ್ಟಣದಲ್ಲಿ ಶೀಘ್ರ ಆಧಾರ್ ಸೇವಾ ಕೇಂದ್ರ ತೆರೆಯಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.

ನೌಕರರ ಹಳೆಯ ಗುತ್ತಿಗೆ ಮುಗಿದಿದೆ. ಹೊಸ ಗುತ್ತಿಗೆ ನೌಕರರ ನೇಮಕ ಮಾಡಿಕೊಂಡು ಸೇವಾ ಕೇಂದ್ರ ಆರಂಭಿಸಲಾಗುವುದು
ಅಂಬಾದಾಸ್, ಉಪ ತಹಶೀಲ್ದಾರ್ ತುರ್ವಿಹಾಳ
ಮಕ್ಕಳ ಶಾಲಾ ಪ್ರವೇಶಾತಿ ಸೇರಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಆಧಾರ್ ಸೇವಾ ಕೇಂದ್ರ ತೆರೆಯದ ಕಾರಣ ಆಧಾರ್ ಕಾರ್ಡ್ ಪಡೆಯಲು ನಿತ್ಯ ತಾಲ್ಲೂಕು ಕೇಂದ್ರಕ್ಕೆ ಅಲೆಯುವಂತಾಗಿದೆ.
ಶಾಮೀದ್ ಅಲಿ ಅರಬ್, ತುರ್ವಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.