ADVERTISEMENT

₹10 ಸಾವಿರ ನೆರವು ನೀಡಿ: ಮಿನಿವಿಧಾನಸೌಧದ ಎದುರು ಪ್ರತಿಭಟನೆ

ಎಡ ಸಂಘಟನೆಗಳಿಂದ ಮಿನಿವಿಧಾನಸೌಧದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 1:34 IST
Last Updated 2 ಜೂನ್ 2021, 1:34 IST
ಸಿಂಧನೂರಿನ ಮಿನಿವಿಧಾನಸೌಧದ ಎದುರು ಎಡ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು
ಸಿಂಧನೂರಿನ ಮಿನಿವಿಧಾನಸೌಧದ ಎದುರು ಎಡ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು   

ಸಿಂಧನೂರು: ಲಾಕ್‌ಡೌನ್‌ನಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಬಿಪಿಎಲ್ ಕುಟುಂಬಗಳಿಗೆ ತಲಾ ₹10 ಸಾವಿರ ಮಾಸಿಕ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ ಸಿಪಿಐಎಂ, ಸಿಪಿಐ, ಸಿಪಿಐ(ಎಂಎಲ್) ಲಿಬರೇಷನ್, ಎಸ್‍ಯುಸಿಐ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಾಲ್ಲೂಕು ಘಟಕ ಜಂಟಿಯಾಗಿ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಎದುರು ಪ್ರತಿಭಟಿಸಿದವು.

ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸಿ, ಸಮರೋಪಾದಿಯಲ್ಲಿ ಅಗತ್ಯ ನೆರವಿಗೆ ಕ್ರಮವಹಿಸದೆ ಕೇವಲ ಲಾಕ್‍ಡೌನ್ ಮೂಲಕ ಮಾತ್ರವೇ ಸಾಂಕ್ರಮಿಕ ರೋಗವನ್ನು ನಿಯಂತ್ರಿಸುವ ಸರ್ಕಾರದ ನಿಲುವುವನ್ನು ಎಡಪಕ್ಷಗಳು ಖಂಡಿಸುತ್ತವೆ. ಅಗತ್ಯಕ್ಕನುಗುಣವಾಗಿ ಬೆಡ್, ಆಮ್ಲಜನಕ, ವೆಂಟಿಲೇಟರ್ ಹಾಗೂ ರೆಮ್‍ಡಿಸಿವಿರ್ ಚುಚ್ಚುಮದ್ದು ಇಲ್ಲದೆ ಸೋಂಕಿತರು ನರಳಾಡುತ್ತಿದ್ದಾರೆ. ಕೋವಿಡ್ ಲಸಿಕೆ ಕೊರತೆ ಇದ್ದಾಗ್ಯೂ ಸಾಮೂಹಿಕ ಲಸಕೀಕರಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಸಿಪಿಐಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ ದೂರಿದರು.

ಕೋವಿಡ್ ನಿಯಂತ್ರಿಸಲು ತಕ್ಷಣ ಸಾರ್ವತ್ರಿಕವಾಗಿ ಉಚಿತ ಲಸಿಕೆ, ಔಷಧಿ ಮತ್ತು ಚಿಕಿತ್ಸೆ ನೀಡಬೇಕು. ರಾಜ್ಯದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಸಿಪಿಐಎಂಎಲ್ ಲಿಬರೇಷನ್ ಸಂಚಾಲಕ ನಾಗರಾಜ ಪೂಜಾರ್ ಒತ್ತಾಯಿಸಿದರು.

ADVERTISEMENT

ತಹಶೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಪತ್ರ ಸ್ವೀಕರಿಸಿದರು.

ಎಐಟಿಯುಸಿ ಮುಖಂಡ ಡಿ.ಎಚ್.ಕಂಬಳಿ, ಸಿಪಿಐಎಂ ಎಸ್.ದೇವೇಂದ್ರಗೌಡ, ಸಿಐಟಿಯು ಗೇಸುದರಾಜ್, ಗರೀಬ್‍ಸಾಬ ಕೊಡ್ಲಿ, ಹಳ್ಳಪ್ಪ, ಕಾರ್ಮಿಕ ಮುಖಂಡರಾದ ಶ್ರೀನಿವಾಸ ಬುಕ್ಕನಟ್ಟಿ, ಬಿ.ಎನ್.ಯರದಿಹಾಳ, ಬಸವರಾಜ ಕೊಂಡೆ ಹಾಗೂ ಮಲ್ಲಿಕಾರ್ಜುನ ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.