ಮಾನ್ವಿ (ರಾಯಚೂರು ಜಿಲ್ಲೆ): ನಟ ಸಲ್ಮಾನ್ ಖಾನ್ ಹಾಗೂ ಅವರ ಸಿನಿಮಾದ ಗೀತೆ ರಚನೆಕಾರನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಾನ್ವಿ ಪಟ್ಟಣದ ಸೊಹೆಲ್ ಪಾಷಾ (23) ಎನ್ನುವವನನ್ನು ಮುಂಬೈ ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.
ಪಟ್ಟಣದ ವಾರ್ಡ್ ನಂ 5, ಶಾದಿ ಮಹಲ್ ಹತ್ತಿರದ ನಿವಾಸಿ, ಯುವಕ ಸೊಹೆಲ್ ಪಾಷಾ ನವೆಂಬರ್ 7ರಂದು ಮುಂಬೈ ನಗರದ ಪೊಲೀಸರ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, 'ನನಗೆ ₹5 ಕೋಟಿ ನೀಡದಿದ್ದರೆ, ಸಲ್ಮಾನ್ ಖಾನ್ ಮತ್ತು ' ಮೈ ಸಿಕಂದರ್ ಹೂಂ' ಗೀತೆಯ ರಚನೆಕಾರನನ್ನು ಕೊಲ್ಲುವೆ' ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಗೀತರಚನೆಕಾರ ಇನ್ನು ಮುಂದೆ ಹಾಡುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಸಲ್ಮಾನ್ ಖಾನ್ ಅವರಿಗೆ ಧೈರ್ಯವಿದ್ದರೆ ಅವರನ್ನು ಉಳಿಸಿ' ಎಂದು ಬೆದರಿಕೆ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಿದ್ದ ಎಂದು ಗೊತ್ತಾಗಿದೆ.
ಮುಂಬೈ ಪೊಲೀಸರ ತನಿಖೆ: ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಪೋನ್ ಸಂಖ್ಯೆಯ ಮಾಹಿತಿಯೊಂದಿಗೆ ತನಿಖೆ ಚುರುಕುಗೊಳಿಸಿದ ಮುಂಬೈ ನಗರದ ಅಪರಾಧ ವಿಭಾಗದ ಪೊಲೀಸರು ಮಾನ್ವಿ ಪಟ್ಟಣಕ್ಕೆ ಆಗಮಿಸಿ ಒಂದು ವಾರ ಕಾಲ ಸ್ಥಳೀಯ ವಸತಿ ಗೃಹವೊಂದರಲ್ಲಿ ಮೊಕ್ಕಾಂ ಹೂಡಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು.
ಬೆದರಿಕೆ ಕರೆಗೆ ಬಳಸಿದ ಫೋನ್ ನಂಬರ್ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ವೆಂಕಟೇಶ ನಾರಾಯಣ ಎಂಬುವವರಿಗೆ ಸೇರಿದ್ದನ್ನು ಪತ್ತೆ ಹಚ್ಚಿದ್ದರು. ವೆಂಕಟೇಶ ನಾರಾಯಣ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಫೋನ್ ಗೆ ಇಂಟರ್ನೆಟ್ (ಡಾಟಾ) ಬಳಕೆಯಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.
ಆದರೆ ವೆಂಕಟೇಶ ನಾರಾಯಣ್ ಅವರ ಫೋನ್‌ಗೆ ವಾಟ್ಸಪ್ ಇನ್‌ಸ್ಟಾಲ್ ಮಾಡಲು ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಬಂದಿರುವುದು ಬೆಳಕಿಗೆ ಬಂದಿದೆ.
'ನವೆಂಬರ್ 3 ರಂದು ಮಾನ್ವಿ ಪಡೆದ ಉದ್ಯಾನದ ಹತ್ತಿರ ಅಪರಿಚಿತರು ನನ್ನ ಬಳಿಗೆ ಬಂದು ಕರೆ ಮಾಡಲು ಫೋನ್ ಇದೆಯೇ ಎಂದು ಕೇಳಿ, ಪೋನ್ ಪಡೆದಿದ್ದರು' ಎಂದು ನಾರಾಯಣ್ ನಂತರ ಪೊಲೀಸರಿಗೆ ತಿಳಿಸಿದ್ದರು.
ವೆಂಕಟೇಶ ನಾರಾಯಣ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಆರೋಪಿ ಸೊಹೆಲ್ ಪಾಷಾ ತನ್ನ ಸ್ವಂತ ಫೋನ್‌ನಲ್ಲಿ ವಾಟ್ಸಪ್ ಕ್ರಿಯೆಟ್ ಮಾಡಿಕೊಂಡಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಸೋಮವಾರ ರಾತ್ರಿ ಮುಂಬೈ ಪೊಲೀಸರು ಸೊಹೆಲ್ ಪಾಷಾನನ್ನು ವಶಕ್ಕೆ ತೆಗೆದುಕೊಂಡು ಮಾನ್ವಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ನಾನು ಮತ್ತು ಸಲ್ಮಾನ್ ಖಾನ್ ಸಿನಿಮಾದ ಗೀತೆ ಹೆಚ್ಚು ಫೇಮಸ್ ಆಗಲು ಈ ಕೃತ್ಯ ಎಸಗಿರುವೆ' ಎಂದು ಸೊಹೆಲ್ ಪಾಷಾ ತಿಳಿಸಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಯುವಕ ಸೊಹೈಲ್ ಪಾಷಾನನ್ನು ಮುಂಬೈಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.