ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ)ಗೆ ಜುಲೈ 18 ರಿಂದ ನೀರು ಹರಿಸಲಾಗುತ್ತಿದ್ದು, ಕಾಲುವೆ ಮೇಲ್ಭಾಗದಲ್ಲಿ ನೀರು ಕಬಳಿಕೆ ಆಗದಂತೆ ನಿಗಾ ವಹಿಸಬೇಕು ಎಂದು ನೀರು ನಿರ್ವಹಣೆಗೆ ನಿಯೋಜಿಸಿದ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಸೂಚನೆ ನೀಡಿದ್ದಾರೆ.
ಕಾಲುವೆ ಕೊನೆಭಾಗದಲ್ಲಿ ರೈತರು ಬೆಳೆದಿರುವ ಹತ್ತಿ, ಭತ್ತ, ಜೋಳ, ಮೆಣಸಿನಕಾಯಿ ಹಾಗೂ ತೊಗರಿ ಬೆಳೆಗೆ ಸಮರ್ಪಕವಾಗಿ ನೀರು ದೊರಕಿಸಬೇಕಿದೆ. ಮೇಲ್ಭಾಗದಲ್ಲಿ ರೈತರು ಅನಧಿಕೃತವಾಗಿ ನೀರು ಪಡೆಯುವುದಕ್ಕೆ ಅವಕಾಶ ನೀಡಬಾರದು. ಕೊನೆಭಾಗದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ತಿಳಿಸಿದ್ದಾರೆ.
ಅಕ್ರಮ ನೀರಾವರಿಯಿಂದಾಗಿ ಕೊನೆಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ರೈತ ಸಂಘಟನೆಗಳು ದೂರು ಸಲ್ಲಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ನೀರು ಕಬಳಿಕೆ ಆಗದಂತೆ ಎಚ್ಚರಿಕೆ ವಹಿಸಿ, ಕೊನೆಭಾಗಕ್ಕೆ ನೀರು ತಲುಪುವಂತೆ ಮಾಡಬೇಕು. ತುಂಗಭದ್ರಾ ಕಾಲುವೆಗಳ 15ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾಸಿರುವಂತೆ, ಟಿಎಲ್‌ಬಿಸಿಗೆ ನವೆಂಬರ್ 30 ರವರೆಗೂ ನೀರು ಹರಿಸಲಾಗುತ್ತದೆ. 4,100 ಕ್ಯುಸೆಕ್ ನೀರು ಹರಿಸಲು ಸಭೆಯಲ್ಲಿ ನಿರ್ಣಯವಾಗಿದೆ.
ರಾತ್ರಿ ಕೂಡಾ ಕಾಲುವೆ ಭಾಗದಲ್ಲಿ ನಿಗಾ ವಹಿಸಬೇಕು. ಇದಕ್ಕಾಗಿ ತಂಡಗಳನ್ನು ರಚಿಸಿಕೊಂಡು ಅನಧಿಕೃತವಾಗಿ ಪೈಪ್‌ಲೈನ್ ಕಿತ್ತುಹಾಕಬೇಕು. ನೀರಾವರಿ ಇಲಾಖೆಯ ಎಂಜಿನಿಯರುಗಳು ಮತ್ತು ಸಿಬ್ಬಂದಿ ಅನಧಿಕೃತ ನೀರು ಬಳಸಿಕೊಂಡು ಬೆಳೆ ಬೆಳೆಯುತ್ತಿರುವವರನ್ನು ಗುರುತಿಸಬೇಕು. ಅವರಿಗೆ ನೋಟಿಸ್ ಕೊಟ್ಟು ಪೈಪ್‌ಲೈನ್ ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅನಧಿಕೃತ ನೀರು ಬಳಕೆದಾರರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕಾಲುವೆಯಲ್ಲಿ ಗೇಜ್ ಕಾಪಾಡಿಕೊಳ್ಳಬೇಕು. ಉಪಕಾಲುವೆಗಳ ಗೇಜ್ ನಿರ್ವಹಣೆಗೆ ಅಗತ್ಯ ಕೆಲಸ ಮಾಡಿಕೊಳ್ಳಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.