ಲಿಂಗಸುಗೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಖರ್ಚು ವೆಚ್ಚ ಮಾಡಿರುವುದನ್ನು ಪರಿಶೀಲಿಸಲು ಸಾಮಾಜಿಕ ಲೆಕ್ಕ ಪರಿಶೋಧನೆ ನೇಮಿಸಲಾಗುತ್ತಿದೆ. ಹಣ ದುರ್ಬಳಕೆ, ಕಾಮಗಾರಿ ನೆನೆಗುದಿ ಸೇರಿ ಇತರೆ ಲೋಪಗಳ ವರದಿ ಸಲ್ಲಿಸಿದರೂ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ.
ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯದೆ, ಕ್ರಿಯಾಯೋಜನೆ ಇಲ್ಲದೆ ಕೆಲಸ ನಿರ್ವಹಿಸಿ, ಎಂ.ಬಿ ರೆಕಾರ್ಡ್ ಬರೆಯದೆ ಹಣ ಪಾವತಿ, ಸರ್ಕಾರಿ ನೌಕರರು, ಕೆಲಸಕ್ಕೆ ಹೋಗದವರು, ಸಾಮಾಗ್ರಿ ಖರೀದಿ ಬಿಲ್ಲು ವ್ಯತ್ಯಾಸ, ನಕಲಿ ಬಿಲ್ಲುಗಳು, ಗುತ್ತಿಗೆದಾರರ ಮೂಲಕ ಅನುಷ್ಠಾನ, ನಿಗದಿತ ಸ್ಥಳಗಳಲ್ಲಿ ಕೆಲಸ ಮಾಡದಿರುವುದು ಸೇರಿದಂತೆ ಹಲವು ಕಾರಣಗಳಿಂದ ಹಣ ದುರ್ಬಳಕೆ ಕುರಿತು ವರದಿ ಸಲ್ಲಿಸುತ್ತ ಬಂದಿದೆ.
ಉದಾಹರಣೆಗೆ ಆನೆಹೊಸೂರು ಗ್ರಾಮ ಪಂಚಾಯಿತಿಲ್ಲಿ 2019-20ರಲ್ಲಿ 63 ಕಾಮಗಾರಿಗಳಿಗೆ ಕೂಲಿ ಮತ್ತು ಸಾಮಾಗ್ರಿ ವೆಚ್ಚ ಎಂದು ₹29,89,691 ಲಕ್ಷ ವ್ಯಯ ಮಾಡಲಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನ ಸಮಿತಿ 2020-21ರಲ್ಲಿ ಪರಿಶೋಧನೆ ನಡೆಸಿ ₹80,945 ವಸೂಲಿ ಹಾಗೂ ₹27,28,871 ಹಣ ದುರ್ಬಳಕೆ ಕುರಿತು ವರದಿ ಸಲ್ಲಿಸಿದೆ.
ಅದೇ ರೀತಿ ಆನೆಹೊಸೂರು ಸೇರಿದಂತೆ ಗುಂತಗೋಳ, ನಾಗರಹಾಳ, ಗೊರೆಬಾಳ, ಖೈರವಾಡಗಿ, ಬಯ್ಯಾಪುರ, ಮಾವಿನಭಾವಿ, ಕೋಠ, ಬನ್ನಿಗೋಳ, ಹೊನ್ನಳ್ಳಿ, ಗೌಡೂರು, ಹಲ್ಕಾವಟಗಿ, ದೇವರಭೂಪುರ, ರೋಡಲಬಂಡ (ತವಗ), ನೀರಲಕೆರಿ, ಕಾಚಾಪುರ, ಗೆಜ್ಜಲಗಟ್ಟಾ, ಆನ್ವರಿ, ಸರ್ಜಾಪುರ, ಚಿತ್ತಾಪುರ, ಉಪ್ಪಾರನಂದಿಹಾಳ ಸೇರಿದಂತೆ ಇತರೆ ಪಂಚಾಯಿತಿಗಳ ಕೋಟ್ಯಂತರ ಹಣ ದುರ್ಬಳಕೆ ವರದಿಗಳು ದೂಳು ತಿನ್ನುತ್ತಿವೆ.
2019-20ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಮೇಲ್ಕಾಣಿಸಿದ ಗ್ರಾಮ ಪಂಚಾಯಿತಿಗಳಲ್ಲಿ 3964 ಕಾಮಗಾರಿಗೆ ಕೂಲಿ ಮತ್ತು ಸಾಮಾಗ್ರಿ ಖರೀದಿಗೆ ₹31 ಕೋಟಿ ಖರ್ಚು ಹಾಕಲಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ವಿವಿಧ ಕಾರಣಗಳಿಂದ ವಸೂಲಾತಿಗೆ ₹1.3 ಕೋಟಿ ಹಾಗೂ ಆಕ್ಷೇಪಾರ್ಹ ಕಾಮಗಾರಿ ಹಣ ₹1.1ಕೋಟಿ ಸೇರಿದಂತೆ ಒಟ್ಟು ₹12 ಕೋಟಿ ವ್ಯತ್ಯಾಸ ಕುರಿತು ವರದಿಗಳು ಸಲ್ಲಿಕೆ ಆಗಿವೆ.
ಹಲವು ವರ್ಷಗಳಿಂದ ಸಾಮಾಜಿಕ ಲೆಕ್ಕ ಪರಿಶೋಧನ ಸಮಿತಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಜನರ ಮಧ್ಯೆ ಲೆಕ್ಕಪತ್ರ ಪರಿಶೀಲನೆ ನಡೆಸುತ್ತಾರೆ. ಸಾರ್ವಜನಿಕರ ಆಕ್ಷೇಪಣೆ, ಕಾಮಗಾರಿ ಸ್ಥಳ ಪರಿಶೀಲನೆ ಆಧರಿಸಿ ವಸೂಲಿ ಮಾಡಬಹುದಾದ ಹಣ ಮತ್ತು ಅಪೂರ್ಣ ಕಾಮಗಾರಿಗೆ ಬಳಸಿದ ಹಣದ ಕುರಿತು ವರದಿ ಸಲ್ಲಿಸುತ್ತ ಬಂದಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಿವಿಧ ಸಂಘಟನೆಗಳ ಸಾಮೂಹಿಕ ಆರೋಪವಾಗಿದೆ.
‘2019-20ರ ಅವಧಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ತಾಲ್ಲೂಕಿನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಸಮಿತಿ ಹಣ ಮರುಪಾವತಿ ₹13.43ಲಕ್ಷ ಹಾಗೂ ವಿವಿಧ ಕಾರಣಗಳಿಂದ ಅಪೂರ್ಣ ಕಾಮಗಾರಿ ಹಣ ₹11.93 ಕೋಟಿ ಒಟ್ಟು ₹12.07 ಕೋಟಿ ಹಣ ದುರ್ಬಳಕೆ ವರದಿ ಸಲ್ಲಿಸಿದೆ. ವರದಿ ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.
ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಉಮೇಶ ಮಾತನಾಡಿ, ‘ಮೃತರು, ವಲಸಿಗರು, ನೌಕರರು ಸೇರಿದಂತೆ ಇತರೆ ಅನ್ಯ ಕಾರಣಕ್ಕೆ ಪಾವತಿ ಮಾಡಿದ ಹಣ ವಸೂಲಾತಿಗೆ ವರದಿ ಮಾಡುತ್ತಾರೆ. ಆ ಹಣ ವಸೂಲಿಗೆ ಕ್ರಮ ಕೈಗೊಳ್ಳುತ್ತೇವೆ. ಆಕ್ಷೇಪಾರ್ಹ ಕಾಮಗಾರಿ ಹಣಕಾಸಿಗೆ ಸಂಬಂಧಿಸಿ ತಾಲ್ಲೂಕು ಮಟ್ಟದ ಅಡಾಕ್ ಕಮಿಟಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.