ADVERTISEMENT

14 ರಿಂದ ರಾಯಚೂರಿನಲ್ಲಿ ಕೃಷಿ ಮೇಳ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:42 IST
Last Updated 12 ಡಿಸೆಂಬರ್ 2019, 10:42 IST

ರಾಯಚೂರು: ಡಿಸೆಂಬರ್‌ 14 ರಿಂದ ಮೂರು ದಿನಗಳವರೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿ ಮೇಳ ಆಯೋಜಿಸಲಾಗುವುದು ಎಂದು ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ‘ನೆಲ ಜಲ ಉಳಿಸಿ, ಆದಾಯ ಹೆಚ್ಚಿಸಿ’ ಎಂಬ ಘೋಷಣೆಯಡಿ ಮೇಳ ಆಯೋಜನೆ ಮಾಡಲಾಗುತ್ತಿದೆ. ನೆರೆ ಹಾಗೂ ಬರ ಎರಡೂ ಸಂದರ್ಭಗಳಲ್ಲಿ ರೈತರು ಸುಸ್ಥಿರವಾಗಿ ಕೃಷಿ ಮಾಡುವ ಕುರಿತು ಪ್ರಾತ್ಯಕ್ಷಿಕೆ, ಮಾದರಿಗಳ ಪ್ರದರ್ಶನದೊಂದಿಗೆ ಮನವರಿಕೆ ಮಾಡಲಾಗುವುದು.

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರು ನಷ್ಟ ಅನುಭವಿಸಿಲ್ಲ. ಕೃಷಿಯೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ, ತೋಟಗಾರಿಕೆ ಮಾಡುವುದು ತುಂಬಾ ಮುಖ್ಯ. ಒಂದೇ ಬೆಳೆಯನ್ನು ಬೆಳೆಯುವುದರಿಂದ ಹವಾಮಾನ ವೈಪರೀತ್ಯಕ್ಕೀಡಾಗಿ ಸಂಕಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕೃಷಿ ಮೇಳದ ಮೂಲಕ ಮಾಹಿತಿ ನೀಡಲಾಗುವುದು ಎಂದರು.

ADVERTISEMENT

ನೆಲ, ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ರೈತರಿಗೆ ಸಹಾಯಕವಾಗುವ ಕೃಷಿ ಸಾಧನಗಳು, ಔಷಧಿಗಳು ಹಾಗೂ ಬೀಜಗಳನ್ನು ಮಾರಾಟ ಮಾಡುವ ಕಂಪೆನಿಗಳು ಕೂಡಾ ಮೇಳದಲ್ಲಿ ಭಾಗವಹಿಸುತ್ತಿವೆ. ಮುಖ್ಯವಾಗಿ ಸಾಧಕ ರೈತರೊಂದಿಗೆ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.