ADVERTISEMENT

ಮುಂಗಾರು ಹಂಗಾಮಿಗೆ 1.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ: ನಜೀರ್

ಸುದ್ದಿಗೋಷ್ಠಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:45 IST
Last Updated 24 ಜುಲೈ 2024, 14:45 IST
ನಜೀರ್ ಅಹ್ಮದ್
ನಜೀರ್ ಅಹ್ಮದ್   

ಸಿಂಧನೂರು: ಮುಂಗಾರು ಹಂಗಾಮಿಗೆ ಬಿತ್ತನೆ ಗುರಿಯು 1,19,815 ಹೆಕ್ಟೇರ್ ಪ್ರದೇಶವಿದ್ದು, ಆದರೆ ಪ್ರಸ್ತುತ ತೊಗರಿ, ಸಜ್ಜೆ, ಹತ್ತಿ, ಸೂರ್ಯಕಾಂತಿ, ಹೆಸರು, ಮೆಕ್ಕೆಜೋಳ ಮುಂತಾದ ಮಳೆಯಾಶ್ರಿತ ಬೆಳೆಗಳನ್ನು 26,045 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಬೆಳೆಗಳು ಉತ್ತಮ ಬೆಳವಣಿಗೆಯಲ್ಲಿವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ತಾಲ್ಲೂಕಿನ ವಾಡಿಕೆ ಮಳೆಯು ಜನವರಿಯಿಂದ ಜುಲೈವರೆಗೆ ಸರಾಸರಿ 202.6 ಮಿ.ಮೀ ಇದ್ದು, ವಾಸ್ತವದಲ್ಲಿ 113.07 ಮಿ.ಮೀ ಉತ್ತಮ ಮಳೆಯಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿ ಕಾಲುವೆಗೆ ನೀರು ಹರಿದು ಬರುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆ ಬಿರುಸಿನಿಂದ ಪ್ರಾರಂಭಗೊಂಡಿದೆ. ಬಿತ್ತನೆ ಗುರಿಯಲ್ಲಿ ಶೇ 75ರಷ್ಟು ನೀರಾವರಿ ಪ್ರದೇಶವಿದ್ದು, ಪ್ರಮುಖವಾಗಿ ಭತ್ತದ ಬೆಳೆಯನ್ನು ಅಲವಂಬಿಸಿರುವುದರಿಂದ ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ’ ಎಂದು ವಿವರಿಸಿದರು.

ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ. ಈಗಾಗಲೇ ಎಲ್ಲ ಸೊಸೈಟಿಗಳ ಸಿಇಒಗಳ ಸಭೆ ನಡೆಸಿ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ಪೂರೈಕೆ ಮಾಡಲಾಗಿದೆ. ರೈತರು ತಮ್ಮ ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಿ ಬೀಜ, ರಸಗೊಬ್ಬರ ಖರೀದಿಸಿದ ನಂತರ ಅಧಿಕೃತ ಬಿಲ್ ಪಡೆದುಕೊಳ್ಳಬೇಕು. ಖಾಲಿ ಚೀಟಿಯಲ್ಲಿ ಬಿಲ್ ಪಡೆಯಬಾರದು ಎಂದು ಹೇಳಿದರು.

ADVERTISEMENT

2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ರೈತರು ತಮ್ಮ ಬೆಳೆಗಳನ್ನು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ಸಾಲ ಪಡೆದ ರೈತರು ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್‌ಗಳಲ್ಲಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಸಂರಕ್ಷಣೆ ಪೋರ್ಟಲ್ ಮೂಲಕ ಆಗಸ್ಟ್‌ 16 ರೊಳಗೆ ವಿಮಾ ಕಂತಿನ ಮೊತ್ತವನ್ನು ಯುನಿವರ್ಸಲ್ ಸೊಂಪೋ ಇನ್‌ಶ್ಯೂರನ್ಸ್ ಕಂಪನಿ ಲಿಮಿಟೆಡ್‌ಗೆ ಪಾವತಿಸಬೇಕು ಎಂದು ತಿಳಿಸಿದರು.

ಆ್ಯಪ್‌ನಲ್ಲೇ ಬೆಳೆ ಸಮೀಕ್ಷೆ ದಾಖಲಿಸಿ: ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನು ತಾವೇ ಮಾಡಬಹುದಾಗಿದೆ. ಕ್ರಾಪ್ ಸರ್ವೆ ಖಾರಿಫ್–2024 ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಈಗಾಗಲೇ ಆರಂಭವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲದಿದ್ದಲ್ಲಿ ಅವರಿಗೆ ಅನುಕೂಲವಾಗಲೆಂದು ಕೃಷಿ ಇಲಾಖೆಯಿಂದ ಪ್ರತಿ ಹಳ್ಳಿಗೆ ಪಿ.ಆರ್ ನೇಮಕ ಮಾಡಲಾಗಿದೆ. ರೈತರ ಬೆಳೆ ಸಮೀಕ್ಷೆಯನ್ನು ಅಪ್ಲೋಡ್ ಮಾಡುವುದು ಇವರ ಕೆಲಸ. ರೈತರು ಬೆಳೆ ಸಮೀಕ್ಷೆ ಮೂಲಕ ತಾವು ಬೆಳೆದ ಬೆಳೆಗಳ ನಿಖರ ಮಾಹಿತಿ ನೀಡಿದರೆ ಬೆಳೆ ಪರಿಹಾರ ಬೆಳೆ ವಿಮಾ ಸಂದರ್ಭದಲ್ಲಿ ತೊಂದರೆ ಆಗುವುದನ್ನು ತಪ್ಪಿಸಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಖಾರಿಫ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡಿ ಬೆಳೆ ವಿವರ ದಾಖಲಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.