ಸಿಂಧನೂರು: ‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನಸಹಾಯವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಲ್ಲು ಕ್ವಾರಿ ಸಂಘದ (ಎಐಟಿಯುಸಿ) ವತಿಯಿಂದ ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ನೋಂದಣಿ, ಮರು ನವೀಕರಣ ಹಾಗೂ ಸಹಾಯಧನದ ಅರ್ಜಿಗಳನ್ನು ಸಲ್ಲಿಸಲು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನಿಯಮಾನುಸಾರ ಸಂಘಟನೆಗಳಿಗೆ ಕಾಮನ್ ಸರ್ವಿಸ್ ಸೆಂಟರ್ ಐಡಿ ನೀಡಬೇಕು ಎಂದು ಒತ್ತಾಯಿಸಲಾಯಿತು.
‘ಖಾಲಿ ನಿವೇಶನ ಹೊಂದಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು ಎನ್ನುವುದು ಸೇರಿದಂತೆ ಇತರ ಪ್ರಮುಖ 10 ಬೇಡಿಕೆಗಳನ್ನು ಈಡೇರಿಸಲು ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ ಒತ್ತಾಯಿಸಿದರು.
ಈ ಮೂಲಕ ಸರ್ಕಾರ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಅವರು ಈ ವೇಳೆ ಆಗ್ರಹಿಸಿದರು.
ಶಿರಸ್ತೇದಾರ್ ಚಂದ್ರಶೇಖರ ಅವರಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ, ಪದಾಧಿಕಾರಿಗಳಾದ ಕಾಳಪ್ಪ ಮೇಸ್ತ್ರಿ, ಶಿವಪ್ಪ ಮೇಸ್ತ್ರಿ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕ ಮುಖಂಡರಾದ ಡಿ.ಎಚ್.ಕಂಬಳಿ, ನಾಗರಾಜ ಪೂಜಾರ್, ಹಮಾಲರ ಸಂಘದ ಮುಖಂಡರಾದ ಆದಪ್ಪ ಬಿರಾದಾರ, ವಿರುಪಣ್ಣ ಸುಕಾಲಪೇಟೆ, ಮುಕ್ತುಂಸಾಬ, ಖಾಜಾಸಾಬ ಗಂಗಾನಗರ ಹಾಗೂ ಗಂಗಣ್ಣ ಹೊಸಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.