ADVERTISEMENT

ರಾಯಚೂರು | 19 ಪ್ರೌಢಶಾಲೆಯ ಎಲ್ಲರೂ ಉತ್ತೀರ್ಣ

ಐದು ಪ್ರೌಢ ಶಾಲೆಗಳ ಒಬ್ಬ ವಿದ್ಯಾರ್ಥಿಯೂ ಪಾಸಾಗಿಲ್ಲ

ಚಂದ್ರಕಾಂತ ಮಸಾನಿ
Published 11 ಮೇ 2024, 5:52 IST
Last Updated 11 ಮೇ 2024, 5:52 IST
ರಾಯಚೂರಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿ
ರಾಯಚೂರಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿ   

ರಾಯಚೂರು: ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಯಚೂರು ರಾಜ್ಯದ 30 ಜಿಲ್ಲೆಗಳ ಸಾಲಿನಲ್ಲೂ ಗುರುತಿಸಿಕೊಂಡಿಲ್ಲ. ಜಿಲ್ಲೆಯ ಐದು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವುದು ಕಳಪೆ ಸಾಧನೆಗೆ ಇನ್ನೊಂದು ನಿದರ್ಶನವಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿರುವ ಶಾಲೆಗಳ ಫಲಿತಾಂಶ ತೃಪ್ತಿಕರವಾಗಿಲ್ಲ.ಇಲಾಖೆಯಲ್ಲಿ ಮೆರಿಟ್‌ ಆಧಾರಿತವಾಗಿ ನೇಮಕಗೊಂಡ ಶಿಕ್ಷಕರಿದ್ದರೂ ಕಳಪೆ ಫಲಿತಾಂಶ ಏಕೆ ಬರುತ್ತಿದೆ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ತೀವ್ರಗೊಂಡಿದೆ.

ರಾಯಚೂರಿನ ನಯಾ ಮದರಸಾ ಉರ್ದು ಪ್ರೌಢಶಾಲೆ, ಮಾಯಾದೇವಿ ವೀರಭದ್ರ ಶರ್ಮಾ ಪ್ರೌಢಶಾಲೆ, ಸಿಂಧನೂರು ತಾಲ್ಲೂಕಿನ ತುರ್ವಿಹಾಳದ ಕೆ.ವಿರೂಪಾಕ್ಷಪ್ಪ ಸುಕಾಲ್ ಪೇಟ್ ಪ್ರೌಢಶಾಲೆ, ಲಿಂಗಸುಗೂರು ತಾಲ್ಲೂಕಿನ  ರೋಡಲಬಂಡಾ ಕ್ಯಾಂಪ್ ಶ್ರೀಮತಿ ಮಾದಮ್ಮ ಪುಟ್ಟಸ್ವಾಮಿ ಸ್ಮಾರಕ ಪ್ರೌಢಶಾಲೆ, ಮಸ್ಕಿ ತಾಲ್ಲೂಕಿನ ತೋರಣದಿನ್ನಿಯ ಜ್ಞಾನೋದಯ ಪ್ರೌಢಶಾಲೆಗಳ ಒಬ್ಬ ವಿದ್ಯಾರ್ಥಿಯೂ ಪಾಸಾಗಿಲ್ಲ.

ADVERTISEMENT

ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರ ನೇಮಕ ಮಾಡದಿರುವುದು ಹಾಗೂ ಗುಣಮಟ್ಟದ ಫಲಿತಾಂಶ ಪಡೆಯಲು ಇಲಾಖೆಯ ಅಧಿಕಾರಿಗಳು ಯೋಜನೆ ಹಾಕಿಕೊಳ್ಳದಿರುವುದು ಕಾರಣ ಎಂದು ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಹಯ್ಯಾಳಪ್ಪ ಅಭಿಪ್ರಾಯಪಟ್ಟಿದ್ದಾರೆ.


ಶಿಕ್ಷಕರ ಕೊರತೆಯೂ ಕಾರಣ:

ರಾಯಚೂರು ಜಿಲ್ಲೆಯಲ್ಲಿಒಟ್ಟು 4036 ಶಿಕ್ಷಕರ ಅವಶ್ಯಕತೆ ಇದೆ ಎಂದು 2023ರ ಆಗಸ್ಟ್ 25ರಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಮೊದಲ ಹಂತದಲ್ಲಿ 1565 ಹಾಗೂ ದ್ವಿತೀಯ ಹಂತದಲ್ಲಿ 1782 ಶಿಕ್ಷಕರ ಹುದ್ದೆಗೆ ಮಂಜೂರಾತಿ ಮಾಡಲಾಗಿತ್ತು. ನಂತರ ಕೆಕೆಆರ್‌ಡಿಬಿಯಿಂದ ಹೆಚ್ಚುವರಿಯಾಗಿ 689 ಶಿಕ್ಷಕರ ಮಂಜೂರಾತಿ ಮಾಡಲಾಗಿದೆ.

ಶಿಕ್ಷಕರ ಸಾಮೂಹಿಕ ವರ್ಗಾವಣೆಯ ನಂತರ ಅನೇಕ ಶಿಕ್ಷಕರು ಬೇರೆ ಕಡೆಗೆ ವರ್ಗವಾಗಿ ಹೋಗಿದ್ದಾರೆ. ಹೀಗಾಗಿ ಮತ್ತೆ ಅನೇಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದಲ್ಲದೇ ಮೊದಲಿನಿಂದಲೂ ರಾಯಚೂರು ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು.

‘ರಾಯಚೂರು ಜಿಲ್ಲೆ ಬರುವ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಫಲಿತಾಂಶ ಪಡೆಯುವಂತಾಗಲು ಕಾರ್ಯಕ್ರಮ ರೂಪಿಸಲಾಗುವುದು‘ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೆ.ಡಿ. ಬಡಿಗೇರ.ಹೇಳುತ್ತಾರೆ

ನೂರಕ್ಕೆ ನೂರರಷ್ಟು ಸಾಧನೆ ಮಾಡಿದ ಶಾಲೆಗಳು

ರಾಯಚೂರು: ಜಿಲ್ಲೆಯ 19 ಪ್ರೌಢ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಎಡೆದೊರಿನ ನಾಡಿನ ಗೌರವ ಉಳಿಸಿವೆ.

ಸಿಂಧನೂರು ತಾಲ್ಲೂಕಿನ ವಳಬಳ್ಳಾರಿಯ ಸರ್ಕಾರಿ ಪ್ರೌಢ ಶಾಲೆ, ಹೆಡಗಿನಾಳದ ಸರ್ಕಾರಿ ಪ್ರೌಢ ಶಾಲೆ, ಜಾಲಿಹಾಳದ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ, ಬಾದರ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಜವಳಗೇರಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಿಂಧನೂರಿನ ಎಂಡಿಎನ್. ಫ್ಯೂಚರ್‌ ಆಂಗ್ಲ ಮಾಧ್ಯಮ ಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿವೆ.

ರಾಯಚೂರಿನ ರಾಣಿ ಚೆನ್ನಮ್ಮ ವಸತಿ ಶಾಲೆ, ತಲಮಾರಿಯ ಸರ್ಕಾರಿ ಪ್ರೌಢ ಶಾಲೆ, ಅಭಿಜ್ಞಾನ ಆಂಗ್ಲ ಮಾಧ್ಯಮ ಶಾಲೆ, ದೇವದುರ್ಗದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಸರಕಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜಾಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಣೇಕಲ್‌ನ ಸರ್ಕಾರಿ ಪ್ರೌಢ ಶಾಲೆ ಹಾಗೂ ದೇವದುರ್ಗದ ಜ್ಞಾನ ಗಂಗಾ ಪ್ರೌಢ ಶಾಲೆಯ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿವೆ.

ಮಸ್ಕಿ, ಅಡವಿಬಾವಿ, ಲಿಂಗಸುಗೂರು, ದೇವರಭೂಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುದಗಲ್‌ನ ಐಜಿಆರ್‌ಎಸ್ ಪ್ರೌಢ ಶಾಲೆಯ ಎಲ್ಲ ವಿದ್ಯಾರ್ಥಿಗಳು ತೇೆರ್ಗಡೆ ಹೊಂದಿದ್ದಾರೆ.

ಪ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆ

ವಿಷಯ – ಮಂಜೂರಾದ ಹುದ್ದೆ– ಖಾಲಿ ಹುದ್ದೆಗಳು

ಕನ್ನಡ – 303–109

ಉರ್ದು – 15–4

ಇಂಗ್ಲಿಷ್ – 287–112

ಹಿಂದಿ – 255–122

ಕಲೆ ಕನ್ನಡ – 311–144

ಕಲೆ ಉರ್ದು– 15–3

ಕಲೆ ಇಂಗ್ಲಿಷ್– 10–4

ಪಿಸಿಎಂ ಕನ್ನಡ– 377–98

ಪಿಸಿಎಂ ಉರ್ದು–15–1

ಪಿಸಿಎಂ ಇಂಗ್ಲಿಷ್–15–2

ಪಿಸಿಎಂ ಹಿಂದಿ–

ಸಿಬಿಝಡ್ ಕನ್ನಡ–245–111

ಸಿಬಿಝಡ್ ಉರ್ದು–15–1

ಸಿಬಿಝಡ್ ಇಂಗ್ಲಿಷ್–10–5

ಒಟ್ಟು ಶಿಕಕ್ಷರು –253–114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.