ADVERTISEMENT

ಅವ್ಯವಸ್ಥೆಯ ಆಗರವಾದ ವಸತಿ ನಿಲಯಗಳು: ಬಸವರಾಜ ಮರಳಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:02 IST
Last Updated 27 ಜೂನ್ 2024, 16:02 IST
ಬಸವರಾಜ ಮರಳಿ
ಬಸವರಾಜ ಮರಳಿ   

ಲಿಂಗಸುಗೂರು: ‘ತಾಲ್ಲೂಕಿನ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಗಳು ಅಗತ್ಯ ಸೌಲಭ್ಯ ಸೇರಿದಂತೆ ಗುಣಮಟ್ಟದ ಆಹಾರ ಪೂರೈಕೆ, ಆಡಳಿತಾತ್ಮಕ ವೈಫಲ್ಯತೆಯಿಂದ ಅವ್ಯವಸ್ಥೆಯ ಆಗರವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಬಸವರಾಜ ಮರಳಿ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘18 ವಸತಿ ನಿಲಯಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆ ಆಗುತ್ತಿಲ್ಲ. ನಿಯಮದಂತೆ ಊಟ, ಉಪಹಾರ ನೀಡುತ್ತಿಲ್ಲ. ಶುದ್ಧ ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ’ ಎಂದು ದೂರಿದರು.

‘ಚುನಾವಣಾ ಕರ್ತವ್ಯಲೋಪ ದೂರಿನ ಮೇಲೆ ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ಅಮಾನತು ಆಗಿದ್ದಾರೆ. ಅನ್ಯ ತಾಲ್ಲೂಕಿನ ಸಿಬ್ಬಂದಿಗೆ ಪ್ರಭಾರ ವಹಿಸಿ ಕೊಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಮೇಲ್ವಿಚಾರಕರು ಕೇಂದ್ರ ಸ್ಥಳದಲ್ಲಿ ಇರದೆ, ಬಯೋ ಮೆಟ್ರಿಕ್‍ ಹೆಸರಲ್ಲಿ ಅಕ್ರಮ ನಡೆಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮೇಲ್ವಿಚಾರಕರೇ ಸ್ಥಳೀಯವಾಗಿ ಕಿರಾಣಿ ಖರೀದಿಸಿ ಬೆಂಗಳೂರು ಮೂಲದ ಸಂಸ್ಥೆಯೊಂದರ ಹೆಸರಲ್ಲಿ ಹಣ ಪಡೆದು ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆ. ಪ್ರಭಾರ ಹುದ್ದೆ ನೇಮಕದಲ್ಲೂ ಅವ್ಯವಹಾರ ನಡೆಸಿದ್ದು ಅವ್ಯವಸ್ಥೆ, ಹಣ ದುರ್ಬಳಕೆ, ಬೇಜವಬ್ದಾರಿತನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.